ನವದೆಹಲಿ,ಫೆ.1- ಕೋವಿಡ್ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಪರಿಸ್ಥಿತಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಪ್ರಗತಿಯಾಗುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಜಿಡಿಪಿ ದರ ಶೇ.9.2ರಷ್ಟು ಹೆಚ್ಚಳವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸಂಸತ್‍ನಲ್ಲಿ ಬಜೆಟ್ ಮಂಡಿಸುವ ವೇಳೆ, ಕಳೆದೆರಡು ವರ್ಷಗಳಿಂದ ದೇಶದಲ್ಲಿ ಕೋವಿಡ್-19 ಕಾಣಿಸಿಕೊಂಡು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಇತ್ತೀಚೆಗೆ ನಮ್ಮ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಚೇತರಿಕೆಯಾಗುತ್ತಿದ್ದು, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ ಎಂದು ಹೇಳಿದರು.
ಈಗಿರುವ ಅಂದಾಜಿನಂತೆ ಈ ವರ್ಷದ ಅಂತ್ಯಕ್ಕೆ ಜಿಡಿಪಿ ದರ ಶೇ.9.2ರಷ್ಟು ಏರಿಕೆಯಾಗಲಿದೆ. ಕೋವಿಡ್‍ನಿಂದ ತತ್ತರಿಸಿರುವ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಸುಸ್ಥಿರವಾಗಿದೆ ಎಂದು ತಿಳಿಸಿದರು.
ಸರ್ಕಾರ ತೆಗೆದುಕೊಂಡ ಸುಧಾರಣಾ ಕ್ರಮಗಳಿಂದಾಗಿ ಅಡೆತಡೆಗಳ ನಡುವೆಯೂ ನಾವು ಗುರಿ ಸಾಸಿದ್ದೇವೆ. ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಬರುವ ದಿನಗಳಲ್ಲಿ ಇದು ಇನ್ನಷ್ಟು ವೇಗವಾಗಿವ ವೃದ್ದಿಯಾಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
