“ಅಫ್ಘಾನಿಸ್ತಾನ ಭಯೋತ್ಪಾದಕರಿಗೆ ಸ್ವರ್ಗವಾಗಲು ತಾಲಿಬಾನ್ ಬಿಡಬಾರದು”
ವಾಷಿಂಗ್ಟನ್, ಅ.29- ತಾಲಿಬಾನ್ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ನೆಲೆ ಒದಗಿಸುವುದಿಲ್ಲ ಎಂಬುದನ್ನು ಖಚಿತ ಪಡಿಸಬೇಕು ಎಂದು ಅಮೆರಿಕಾ ಮತ್ತು ಭಾರತ ದೇಶಗಳು ಒತ್ತಾಯಿಸಿವೆ. ಭಯೋತ್ಪಾದನೆ ವಿರುದ್ಧ ಮೂಲ ಆಧಾರ ಸ್ಥಂಭವಾದ ಜಾಗತಿಕ ತಂತ್ರಗಾರಿಕೆ ಪಾಲುದಾರಿಕೆ ಕುರಿತಂತೆ ಉಭಯ ದೇಶಗಳ ಉನ್ನಾಧಿಕಾರಿಗಳು ಮಾತುಕತೆ ನಡೆಸಿದರು.
ಸಹಕಾರ ಮನೋಭಾವವನ್ನು ಪರಸ್ಪರ ಮುಂದುವರೆಸಲು ಎರಡು ದೇಶಗಳು ಮಾತುಕತೆ ನಡೆಸಿವೆ. ಎರಡು ಕಡೆಯಿಂದಲೂ ಕಾನೂನು ಜಾರಿ, ಮಾಹಿತಿ ಹಂಚಿಕೆ, ಉತ್ತಮ ಅಭ್ಯಾಸಗಳ ಅನುಸರಣೆ, ತಂತ್ರಗಾರಿಕೆ ಬಳಕೆ ಸೇರಿದಂತೆ ಬದ್ಧತೆ ಪ್ರದರ್ಶಿಸಲಾಗಿದೆ. ಎರಡು ದಿನಗಳ ಕಾಲ ನಡೆದ ಮಾತುಕತೆಯಲ್ಲಿ ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾತರದೊಂದಿಗೆ ನಿಲ್ಲುವ ಬದ್ಧತೆಯನ್ನು ಅಮೆರಿಕಾ ಪುನರ್ಸ್ಥಾಪಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿತ ಆಲ್-ಖೈದಾ, ಐಸಿಐಸಿ, ಡೇಶ್, ಲಸ್ಕರ್-ಇ-ತೋಯ್ಬಾ (ಎಲ್ಇಟಿ) ಜೈಶ್-ಇ-ಮೊಹಮ್ಮದ್ (ಜೆಇಎಂ) ಸೇರಿದಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಿರುವುದಾಗಿ ಜಂಟಿ ಹೇಳಿಕೆಯಲ್ಲಿ ಉಭಯ ರಾಷ್ಟ್ರಗಳ ಪ್ರಮುಖರು ತಿಳಿಸಿದ್ದಾರೆ.
ಪ್ರಮುಖವಾಗಿ ತಾಲಿಬಾನ್ ತನ್ನ ನೆಲವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿ ಮಾಡಬಾರದು, ಅಲ್ಲಿಂದ ಬೇರೆ ಯಾವುದೇ ದೇಶದ ಮೇಲಿನ ದಾಳಿಗೆ ವೇದಿಕೆ ಕಲ್ಪಿಸಬಾರದು, ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಮತ್ತು ಅಕ್ರಮ ಶಸ್ತ್ರಾಸ್ತ್ರ ಒದಗಿಸಬಾರದು ಎಂದು ಭಾರತ ಮತ್ತು ಅಮೆರಿಕಾ ಒತ್ತಾಯಿಸಿವೆ. 2017ರ ವಿಶ್ವಸಂಸ್ಥೆಯ ನಿರ್ಣಯದಂತೆ ಅಂತರಾಷ್ಟ್ರೀಯ ಪ್ರವಾಸಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಾಮಥ್ರ್ಯದ ಮಾರ್ಗಗಳ ಜಾರಿಗೆ ಜಂಟಿ ನಿರ್ಣಯ ಕೈಗೊಳ್ಳಲಾಗಿದೆ.