ನವದೆಹಲಿ, ಆ.23- ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಈಗ ಏಷ್ಯಾಕಪ್ ಗೆಲ್ಲುವತ್ತ ಚಿತ್ತ ಹರಿಸುವಾಗಲೇ ರೋಹಿತ್ ಪಡೆಗೆ ಆರಂಭಿಕ ವಿಘ್ನವೊಂದು ಎದುರಾಗಿದೆ. ಆಗಸ್ಟ್ 27 ರಿಂದ ಏಷ್ಯಾಕಪ್ ಸರಣಿ ಆರಂಭಗೊಳ್ಳಲಿದ್ದು, ಆ. 28 ರಂದು ರೋಹಿತ್ ಸಾರಥ್ಯದ ಟೀಂ ಇಂಡಿಯಾವು ಸಾಂಪ್ರಾದಾಯಿಕ ವೈರಿ ಪಾಕಿಸ್ತಾನ ವಿರುದ್ಧದ ಸವಾಲನ್ನು ಎದುರಿಸಲಿದೆ.
ದುಬೈನಲ್ಲೇ ನಡೆದ ಚುಟುಕು ವಿಶ್ವಕಪ್‍ನಲ್ಲಿ ವಿರಾಟ್ ಕೊಹ್ಲಿ ಪಡೆಯು ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ವಿರುದ್ಧ ಸೋಲು ಕಂಡಿರುವುದರಿಂದ ಈ ಪಂದ್ಯವು ಮಹತ್ವ ಪಡೆದಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ಮುಖ್ಯ ತರಬೇತುದಾರ ರಾಹುಲ್‍ದ್ರಾವಿಡ್‍ಗೆ ಕೊರೊನಾ ಸೋಂಕು ತಗುಲಿರುವುದು ಟೀಂ ಇಂಡಿಯಾ ಮೇಲೆ ಭಾರೀ ಪ್ರಭಾವ ಬೀರಲಿದೆ.
ದ್ರಾವಿಡ್‍ಗೆ ಕೊರೊನಾ ಸೋಂಕು ತಗುಲಿರುವುದರಿಂದ ಸಹ ತರಬೇತುದಾರ ಪಾರಾಸ್ ಮಹಂಬ್ರೆ ಅವರೇ ಹಂಗಾಮಿ ತರಬೇತುದಾರರಾಗಿದ್ದು, ಟೂರ್ನಿ ಆರಂಭಕ್ಕೂ ಮುನ್ನ ರಾಹುಲ್ ದ್ರಾವಿಡ್ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆಯನ್ನು ಬಿಸಿಸಿಐ ವ್ಯಕ್ತಪಡಿಸಿದೆ.
ಒಂದು ವೇಳೆ ರಾಹುಲ್ ದ್ರಾವಿಡ್ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಎನ್‍ಸಿಎ ಮುಖ್ಯಸ್ಥ ಹಾಗೂ ಮಾಜಿ ಆಟಗಾರ ವಿವಿಎಸ್ ಲಕ್ಷಣ್ ಅವರು ಏಷ್ಯಾ ಕಪ್ ಸರಣಿಯ ಮುಖ್ಯ ತರಬೇತುದಾರರಾಗಿ ಆಯ್ಕೆಗೊಳ್ಳುವ ಸಂಭವವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಜಿಂಬಾಬ್ವೆ ವಿರುದ್ಧದ ಸರಣಿಯ ವೇಳೆ ರಾಹುಲ್‍ದ್ರಾವಿಡ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಅವರು ಭಾರತದ ಮುಖ್ಯ ತರಬೇತುದಾರನ ಹೊಣೆ ಹೊತ್ತಿದ್ದಲ್ಲದೆ ತಂಡ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಈಗ ರಾಹುಲ್ ದ್ರಾವಿಡ್‍ಗೆ ಕೊರೊನಾ ಸೋಂಕು ತಗುಲಿರುವುದರಿಂದ ಅವರೇ ಭಾರತದ ತಂಡದ ಮುಖ್ಯ ತರಬೇತುದಾರನ ಹೊಣೆಯನ್ನು ಹೊರಿಸಬೇಕೋ ಎಂಬುದು ರಾಹುಲ್ ದ್ರಾವಿಡ್‍ರ ಆರೋಗ್ಯದ ಮೇಲೆ ನಿರ್ಧಾರ ಮಾಡಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಸೇರಿದಂತೆ ಉಳಿದ ಆಟಗಾರರು ಸಂಪೂರ್ಣವಾಗಿ ಫಿಟ್ ಆಗಿದ್ದು ಇಂದು ಬೆಳಗ್ಗೆ ಮುಂಬೈನಿಂದ ಯುಎಇಗೆ ಪ್ರಯಾಣ ಬೆಳೆಸಲಿದ್ದರೆ, ಜಿಂಬಾಬ್ವೆ ವಿರುದ್ಧ 3-0ಯಿಂದ ಕ್ಲೀನ್ ಸ್ವೀಪ್ ಸಾಸಿರುವ ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್, ದೀಪಕ್‍ಹೂಡಾ, ಮೀಸಲು ಆಟಗಾರ ಅಕ್ಷರ್‍ಪಾಟೇಲ್ ಅವರು ಹರಾರೆಯಿಂದ ಇಂದು ಬೆಳಗ್ಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.