ಭಾರತದ ಬೌಲಿಂಗ್‍ಗೆ ತಲೆಬಾಗಿದ ಲಂಕಾ, ಫಾಲೋಆನ್ ಏರಿದ ಟೀಂ ಇಂಡಿಯಾ

Social Share

ಮೊಹಾಲಿ, ಮಾ.6- ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೆ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಮೊಹಾಲಿ ಟೆಸ್ಟ್ ಅನ್ನು ಗೆಲ್ಲಬೇಕೆಂದು ಲೆಕ್ಕಾಚಾರ ಗಳನ್ನು ಹಾಕಿದಂತೆ ಶ್ರೀಲಂಕಾ ತಂಡವನ್ನು ಸೋಲಿನ ದವಡೆಗೆ ದೂಡುವಲ್ಲಿ ರೋಹಿತ್ ಸಾರಥ್ಯದ ಬೌಲರ್‍ಗಳು ಯಶಸ್ವಿಯಾಗಿದ್ದಾರೆ.
ಮೊದಲ ಇನ್ನಿಂಗ್ಸ್‍ನಲ್ಲಿ 174 ರನ್‍ಗಳಿಗೆ ಅಲೌಟ್ ಆಗುವ ಮೂಲಕ 400 ರನ್‍ಗಳ ಹಿನ್ನೆಡೆ ಅನುಭವಿಸಿದ್ದ ಲಂಕಾ ಬ್ಯಾಟ್ಸ್‍ಮನ್‍ಗಳು ದ್ವಿತೀಯ ಇನ್ನಿಂಗ್ಸ್‍ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ದ್ವಿತೀಯ ಇನ್ನಿಂಗ್ಸ್‍ನಲ್ಲಿ ಬ್ಯಾಟಿಂಗ್ ಆರಂಭಿಸಿದ ಲಂಕಾದ ಆರಂಭಿಕ ಆಟಗಾರರಾದ ಲಿಹಿರಿ ತಿರುಮನೆಯವರು ರನ್ ಖಾತೆಯನ್ನೇ ತೆರೆಯದೆ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಮೈದಾನ ತೊರೆದರು.
ನಂತರ ಬಂದ ಪ್ರತ್ಯುಮ್ ನಿಶಾಂಕ ಆರಂಭದಲ್ಲೇ ಬೌಂಡರಿ ಗಳಿಸುವ ಮೂಲಕ ಭರವಸೆ ಮೂಡಿಸಿದರಾದರೂ ಕೂಡ 6 ರನ್ ಗಳಿಸಿದ್ದಾಗ ರವಿಚಂದ್ರನ್ ಅಶ್ವಿನ್‍ರ ಚೆಂಡನ್ನು ಬೌಂಡರಿಗಟ್ಟುವ ತವಕದಲ್ಲಿ ಎಡವಿ ವಿಕೆಟ್ ಕೀಪರ್ ರಿಷಭ್ ಪಂತ್‍ಗೆ ಕ್ಯಾಚ್ ನೀಡಿ ಔಟಾದರು. ನಾಯಕ ದಿಮ್ಮುತ ಕರುಣರತ್ನೆ ( 27 ರನ್, 6 ಬೌಂಡರಿ) ತುಸು ಹೋರಾಟ ನಡೆಸಿದರೂ ಕೂಡ ಮೊಹಮ್ಮದ್ ಶಮಿ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಹಿಡಿದ ಕ್ಯಾಚ್‍ನಿಂದಾಗಿ ಮೈದಾನ ತೊರೆದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಶ್ರೀಲಂಕಾ ಎರಡನೇ ಇನ್ನಿಂಗ್ಸ್‍ನಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು 84 ರನ್ ಗಳಿಸಿದ್ದು ಅಂಜಲೋ ಮ್ಯಾಥ್ಯೂಸ್ (20 ರನ್, 2 ಬೌಂಡರಿ) ಹಾಗೂ ಧನಂಜಯ ಡಿ ಸಿಲ್ವಾ (21 ರನ್, 4 ಬೌಂಡರಿ) ಕ್ರೀಸ್‍ನಲ್ಲಿದ್ದರು.
ಲಂಕಾ 174ಕ್ಕೆ ಅಲೌಟ್:
ಮೊಹಾಲಿ ಟೆಸ್ಟ್‍ನ ಆರಂಭಿಕ ದಿನದ ಅಂತ್ಯಕ್ಕೆ 108 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾ ತಂಡಕ್ಕೆ ಇಂದು ತಮ್ಮ ಬ್ಯಾಟಿಂಗ್‍ನಿಂದ ಬಲ ತುಂಬಬೇಕೆಂಬ ಲೆಕ್ಕಾಚಾರದಲ್ಲೇ ನಿಶಾಂಕ ಹಾಗೂ ಅಸಲಾಂಕ ಅವರು ಕ್ರೀಸ್ ಇಳಿದರು. ಈ ಜೋಡಿಯನ್ನು ಬೇಗನೆ ಬೇರ್ಪಡಿಸಿ ಮೇಲುಗೈ ಸಾಸಬೇಕೆಂದು ಭಾರತದ ನಾಯಕ ರೋಹಿತ್ ಶರ್ಮಾ ಲೆಕ್ಕಾಚಾರ ಹಾಕಿದರೂ ಕೂಡ ತಾಳ್ಮೆಯುತ ಆಟಕ್ಕೆ ಮುಂದಾದ ನಿಶಾಂಕ ಹಾಗೂ ಅಸಲಾಂಕ ಜೋಡಿಯು 5 ನೆ ವಿಕೆಟ್‍ಗೆ 59 ರನ್‍ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ 29 ರನ್ ಗಳಿಸಿದ್ದ ಅಸಲಾಂಕ ಅವರು ಬೂಮ್ರಾರ ಬೌಲಿಂಗ್ ಗತಿ ಅರಿಯದೆ ಎಲ್‍ಬಿಡಬ್ಲ್ಯು ಬಲೆಗೆ ಬಲಿಯಾಗಿ ಮೈದಾನ ತೊರೆದರು.
# ಜಾಡೇಜಾ ಚಮತ್ಕಾರ:
ಅಸಲಾಂಕ ಔಟಾಗುತ್ತಿದ್ದಂತೆ ಶ್ರೀಲಂಕಾದ ಬ್ಯಾಟ್ಸ್‍ಮನ್‍ಗಳು ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ರವೀಂದ್ರಾ ಜಾಡೇಜಾ ಅವರ ಬೌಲಿಂಗ್ ಚಮತ್ಕಾರದ ಎದುರು ತಲೆದೂಗಿದರು. ವಿಕೆಟ್ ಕೀಪರ್ ನಿರೋಶನ್ ಡಿಕ್‍ವೆಲಾ ( 2 ರನ್) ಗಳಿಸಿದರೆ, ಬಾಲಂಗೋಚಿಗಳಾದ ವಿಶ್ವ ಫರ್ನಾಂಡೋ ಹಾಗೂ ಲಹರಿ ಕುಮಾರ ಅವರು ಯಾವುದೇ ರನ್ ಗಳಿಸಿದೆ ಸರ್ ಜಾಡೇಜಾ ಬೌಲಿಂಗ್‍ನಲ್ಲಿ ಔಟಾದರು. ಲಸಿಂತಾ ಎಬುದೆನಿಯಾರ ವಿಕೆಟ್ ಅನ್ನು ವೇಗಿ ಮೊಹಮ್ಮದ್ ಶಮಿ ಕೆಡವಿದರು. ನಿಶಾಂಕ 11 ಬೌಂಡರಿಗಳ ಸಹಿತ 61 ರನ್ ಗಳಿಸಿ ಅಜೇಯರಾಗಿ ಉಳಿದರು
# ಬೌಲಿಂಗ್‍ನಲ್ಲೂ ಮಿಂಚಿ ದಾಖಲೆ ಬರೆದ ಸರ್
ಮೊಹಾಲಿ, ಮಾ.6- ಶ್ರೀಲಂಕಾ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಅಜೇಯ 175 ರನ್ ಗಳಿಸಿದ್ದ ಭಾರತದ ಖ್ಯಾತ ಅಲ್‍ರೌಂಡರ್ ಸರ್ ರವೀಂದ್ರಾ ಜಾಡೇಜಾ ಬೌಲಿಂಗ್‍ನಲ್ಲೂ ಮಿಂಚಿ 5 ವಿಕೆಟ್‍ಗಳನ್ನು ಕಬಳಿಸಿ ಲಂಕಾಗೆ ಫಾನೋಆನ್ ಹೇರುವಲ್ಲಿ ಯಶಸ್ವಿಯಾಗಿದ್ದಲ್ಲದೆ ಟೀಂ ಇಂಡಿಯಾದ ಮಾಜಿ ಖ್ಯಾತ ಸ್ಪಿನ್ನರ್ ಬಿಸನ್ ಸಿಂಗ್ ಬೇಡಿಯವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೆಸ್ಟ್‍ನಲ್ಲಿ ಭಾರತದಲ್ಲಿ ಅತಿ ಹೆಚ್ಚು 5 ವಿಕೆಟ್ ಕಬಳಿಸಿದ್ದ ಖ್ಯಾತಿಯನ್ನು ಬಿಸನ್ ಸಿಂಗ್ ಬೇಡಿ ಅವರು ಹೊಂದಿದ್ದರು, ಅವರು 8 ಬಾರಿ ಈ ಸಾಧನೆ ಮಾಡಿದ್ದರು, ಆದರೆ ಇಂದು ಲಂಕಾ ವಿರುದ್ಧ 41 ರನ್‍ಗಳಿಗೆ 5 ವಿಕೆಟ್ ಕೆಡವುವ ಮೂಲಕ ಜಡ್ಡು ಈ ದಾಖಲೆಯನ್ನು ಸರಿಗಟ್ಟಿದರು.
ಪ್ರಜ್ಞಾನ್ ಓಝಾ 7 ಬಾರಿ ಭಾರತದ ನೆಲದಲ್ಲಿ ಟೆಸ್ಟ್‍ನಲ್ಲಿ 5 ವಿಕೆಟ್ ಕೆಡವಿದ ಸಾಧನೆ ಮಾಡಿದ್ದಾರೆ. ಟೆಸ್ಟ್ ಪಂದ್ಯದಲ್ಲಿ 150 ಕ್ಕೂ ಹೆಚ್ಚು ರನ್‍ಗಳು ಹಾಗೂ 5 ವಿಕೆಟ್ ಕಬಳಿಸಿದವರ ಸಾಲಿನಲ್ಲೂ ಜಡ್ಡು ಸ್ಥಾನ ಪಡೆದುಕೊಂಡರು. ಇದಕ್ಕೂ ಮುನ್ನ ಭಾರತದ ವಿನುಮಂಡಕ್ 1952ರಲ್ಲಿ ಇಂಗ್ಲೆಂಡ್ ವಿರುದ್ಧ 184 ರನ್ ಗಳಿಸಿದ್ದಲ್ಲದೆ ಬೌಲಿಂಗ್‍ನಲ್ಲೂ ಮಿಂಚಿ 196 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
1955ರಲ್ಲಿ ವೆಸ್ಟ್‍ಇಂಡೀಸ್‍ನ ಡೆನ್ನಿಸ್ ಅಟ್ಟಿಕೆಸನ್ ಆಸ್ಟ್ರೇಲಿಯಾ ವಿರುದ್ಧ 219 ರನ್, 5/56 ರನ್.
1962ರಲ್ಲಿ ಭಾರತದ ಪೌಲಿ ಉಮ್ರಿಗರ್ ವೆಸ್ಟ್‍ಇಂಡೀಸ್ ವಿರುದ್ಧ ಅಜೇಯ 172 ರನ್, 5/107.
1966ರಲ್ಲಿ ವೆಸ್ಟ್‍ಇಂಡೀಸ್‍ನ ಗ್ಯಾರಿ ಸೋಬರ್ಸ್ ಇಂಗ್ಲೆಂಡ್ ವಿರುದ್ಧ 174 ರನ್,5/41.
1973ರಲ್ಲಿ ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ನ್ಯೂಜಿಲ್ಯಾಂಡ್ ವಿರುದ್ಧ 201 ರನ್, 5/49.
2022ರಲ್ಲಿ ಭಾರತದ ರವೀಂದ್ರಾ ಜಾಡೇಜಾ ಅಜೇಯ 175 ರನ್, 5/41

Articles You Might Like

Share This Article