ಪಾಲಕ್ಕಾಡ್, ಫೆ.9- ಟ್ರಕ್ಕಿಂಗ್‍ಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಪರ್ವತಗಳ ಸಾಲಿನಲ್ಲಿ ಸಿಲುಕಿದ್ದ ಯುವಕನ್ನು ಬೆಂಗಳೂರನಿಂದ ಆಗಮಿಸಿ ಸೇನಾ ತಂಡ ರಕ್ಷಣೆ ಮಾಡಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ಪ್ರದೇಶದ ಪರ್ವತದ ಸೀಳುಗಳಲ್ಲಿ ಎರಡು ದಿನಗಳಿಂದ ಆಹಾರ, ನೀರು ಇಲ್ಲದೆ ಬಾಬು ಎಂಬ ಯುವಕ ಸಿಲುಕಿದ್ದ.
ಸ್ಥಳೀಯರ ಪ್ರಕಾರ ಬಾಬು ಮೂವರು ಸ್ನೇಹಿತರೊಂದಿಗೆ ಕಡಿದಾದ ಬೆಟ್ಟವನ್ನು ಹತ್ತಲು ನಿರ್ಧರಿಸಿದ್ದರು. ಇಬ್ಬರು ಸ್ನೇಹಿತರು ಅರ್ಧಕ್ಕೆ ಬಿಟ್ಟು ವಾಪಾಸ್ ಬಂದಿದ್ದಾರೆ. ಬಾಬು ಹಠ ಬಿಡದೆ ಬೆಟ್ಟ ಹತ್ತಿದ್ದಾನೆ. ಪರ್ವತದ ತುದಿಗೆ ತಲುಪಿದಾಗ ಆಯಾಸದಿಂದ ಜಾರಿ ಬಿದ್ದಿದ್ದಾನೆ.
ದುರ್ಗಮ ಪರ್ವತಗಳ ಸಾಲಿನಲ್ಲಿ ಸಿಲುಕಿದ ಬಾಬುಗೆ ಎರಡು ದಿನಗಳಿಂದ ಆಹಾರ ಮತ್ತು ನೀರು ಇರಲಿಲ್ಲ. ಬಿಸಿಲಿನ ಝಳ ಮತ್ತು ರಾತ್ರಿಯ ನಿರ್ಮಾನುಷತೆಯಲ್ಲಿ ಜೀವ ಕೈನಲ್ಲಿ ಹಿಡಿದು ಕಾಲ ಕಳೆದಿದ್ದಾನೆ.
ನಿನ್ನೆ ರಾತ್ರಿ ಬೆಂಗಳೂರಿನಿಂದ ರಕ್ಷಣಾ ತಂಡ ಸ್ಥಳಕ್ಕೆ ತಲುಪಿದೆ. ಸ್ಥಳೀಯ ಎನ್‍ಡಿಆರ್‍ಎಫ್, ಕರಾವಳಿ ರಕ್ಷಣಾ ಪಡೆ ಮತ್ತು ವಾಯುಸೇನೆಗಳು ಸಹಕಾರ ನೀಡಿವೆ. ಪರ್ವತಗಳ ಮುಖಭಾಗದಲ್ಲಿ ಸಿಲುಕಿದ್ದ ಬಾಬುನನ್ನು ಇಂದು ಬೆಳಗ್ಗೆ 10.08ರ ಸುಮಾರಿಗೆ ಮೇಲಕ್ಕೆ ಎತ್ತಲಾಗಿದೆ. ರಕ್ಷಣ ಕಾರ್ಯಾಚರಣೆಯ ದೃಶ್ಯಾವಳಿಗಳು ಸ್ಥಳೀಯ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಬಾಬುಗೆ ತಕ್ಷಣಕ್ಕೆ ನೀರು, ಆಹಾರ ಒದಿಸಿ ಸುಧಾರಿಸಿಕೊಳ್ಳಲು ಸಮಯಾವಕಾಶ ನೀಡಲಾಗಿದೆ.
