ತಿರುವನಂತಪುರಂ,ಜು.10-ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಭಾರತ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ವಿದೇಶಿ ವಿನಿಮಯ ಕೊರತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಉಲ್ಬಣಗೊಂಡಿವೆ. ದೇಶದ ಅಧ್ಯಕ್ಷರ ಸರ್ಕಾರಿ ಬಂಗಲೆಯನ್ನು ಜನ ಆಕ್ರಮಿಸಿಕೊಂಡಿದ್ದಾರೆ. ಪ್ರಧಾನಿಯವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
ನೆರೆಯ ರಾಷ್ಟ್ರದ ಬೆಳವಣಿಗೆಗಳ ಬಗ್ಗೆ ತಿರುವನಂತಪುರಂನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಜೈಶಂಕರ್ ಅವರು, ಸದ್ಯಕ್ಕೆ ಅಲ್ಲಿ ನಿರಾಶ್ರಿತರಾಗುವಂತಹ ಸಂಕಷ್ಟ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.
ನಾವು ಮೊದಲಿನಿಂದಲೂ ಶ್ರೀಲಂಕಾಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ. ಅವರಿಗೆ ಸದಾಕಾಲ ಸಹಾಯ ಮಾಡುತ್ತಲೇ ಬಂದಿದ್ದೇವೆ. ತಕ್ಷಣವೇ ಅವರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಅವರು ಏನು ಮಾಡುತ್ತಾರೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದಿದ್ದಾರೆ. ಈ ನಡುವೆ ಭಾರತ ಶ್ರೀಲಂಕಾಗೆ 44 ಮೆಟ್ರಿಕ್ ಟನ್ ರಸಗೊಬ್ಬರವನ್ನು ರಫ್ತು ಮಾಡಿದೆ.