ಹುಬ್ಬಳ್ಳಿ, ಮಾ.3- ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಅವರ ಪಾರ್ಥಿವ ಶರೀರ ಬರುವುದನ್ನು ಕುಟುಂಬಸ್ಥರು ಎದುರು ನೋಡುತ್ತಿದ್ದಾರೆ. ಪಾರ್ಥಿವ ಶರೀರ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಭಾರತ ಸರ್ಕಾರದಿಂದ ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದು ಮೃತ ನವೀನ್ ದೊಡ್ಡಪ್ಪ ಉಜ್ಜನಗೌಡ ಗ್ಯಾನಗೌಡರ್ ತಿಳಿಸಿದರು.
ನವೀನ್ ಮೃತಪಟ್ಟು ಮೂರು ದಿನಗಳಾಗಿದ್ದು, ವೀರಶೈವ ಸಂಪ್ರದಾಯದಂತೆ ಮೂರು ದಿನಗಳ ಕಾರ್ಯವನ್ನು ಸ್ವಾಮೀಜಿಯವರ ನೇತೃತ್ವದಲ್ಲಿ ಕುಟುಂಬಸ್ಥರು ನೆರವೇರಿಸಿದರು. ನವೀನ್ ಫೋಟೋ ಇಟ್ಟು ಪೂಜೆ ಮಾಡಿ ಕಾರ್ಯ ಮಾಡಿ ಕುಟುಂಬಸ್ಥರು ಕಣ್ಣೀರು ಹಾಕಿದರು.
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಗ್ರಾಮಸ್ಥರು, ಬಂಧುಗಳು, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ಮೂರು ದಿನದ ಕಾರ್ಯದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.ರಷ್ಯಾ-ಉಕ್ರೇನ್ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಮಂಗಳವಾರದಂದು ನವೀನ್ ಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಅನೇಕ ಪ್ರಯತ್ನ ನಡೆಸಲಾಗುತ್ತಿದೆ.
# ಆರೋಗ್ಯ ತಪಾಸಣೆ:
ನವೀನ್ ಸಾವಿನಿಂದ ಆಘಾತಕ್ಕೊಳಗಾಗಿರುವ ತಂದೆ-ತಾಯಿ ಮತ್ತು ಅಣ್ಣನ ಆರೋಗ್ಯವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ವಿಜಯಲಕ್ಷ್ಮಿ ಮಠದ್ ಅವರು ತಪಾಸಣೆ ನಡೆಸಿದರು. ಸಾವಿನ ಸುದ್ದಿಯಿಂದ ಯಾರಿಗಾದರೂ ಆಘಾತವಾಗುವುದು ಸಾಮಾನ್ಯ.
ನವೀನ್ ಸಾವಿನ ಸುದ್ದಿ ಕೇಳಿ ನನಗೂ ಕೂಡ ಆಘಾತವಾಗಿತ್ತು. ಸದ್ಯ ಈಗ ಕುಟುಂಬಸ್ಥರ ಆರೋಗ್ಯ ನಾರ್ಮಲ್ ಆಗಿದೆ. ಲಾಕ್‍ಡೌನ್ ಸಮಯದಲ್ಲಿ ನವೀನ್ ಊರಿಗೆ ಬಂದಿದ್ದ. ನಾನು ನಿವೃತ್ತಿ ನಂತರ ನಿನ್ನ ಆಸ್ಪತ್ರೆಗೆ ಬಂದು ನರ್ಸ್ ಆಗಿ ಕೆಲಸ ಮಾಡುತ್ತೇನೆ. ನೇಮಕ ಮಾಡಿಕೊಳ್ತೀಯ ಎಂದು ಜೋಕ್ ಮಾಡಿದ್ದೆ ಎಂದು ನೆನಪು ಮಾಡಿಕೊಂಡರು.
ಕಳೆದ ಸೋಮವಾರ ನಾನು ಕರ್ತವ್ಯದಲ್ಲಿದ್ದಾಗ ಆತನ ತಂದೆ ನವೀನ್ ಜತೆ ಮಾತನಾಡಿದ್ದರು. ಅವನನ್ನು ಏಕೆ ಕರೆಸಲಿಲ್ಲ ಎಂದು ಅವರ ತಂದೆ ಬಳಿ ಕೇಳಿದ್ದೆ. ಯುದ್ಧ ನಡೆಯುವ ಸ್ಥಳದಿಂದ ಬಹಳ ದೂರದಲ್ಲಿದ್ದಾನಮ್ಮ. ಸೇಫ್ ಆಗಿದ್ದಾನೆ ಎಂದು ಅವರ ತಂದೆ ಹೇಳಿದ್ದರು. ಅದೇ ದಿನ ಮಧ್ಯಾಹ್ನವೇ ಸಾವಿನ ಸುದ್ದಿ ಬಂತು. ಸಾವಿನ ಸುದ್ದಿ ಕೇಳಿ ಬಹಳ ದುಃಖವಾಯಿತು ಎಂದು ಆರೋಗ್ಯಾಕಾರಿ ಗದ್ಗದಿತರಾದರು.
