ರ್ಜೆಸ್ಜೋವ್(ಪೊಲೆಂಡ್), ಮಾ.4- ಯುದ್ಧ ಪೀಡಿತ ಉಕ್ರೇನ್ ರಾಜಧಾನಿ ಕ್ಯಿವ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರಿಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಭಾರತ ಸರ್ಕಾರದ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ.
ಪೊಲೆಂಡ್‍ನ ವಿಮಾನ ನಿಲ್ದಾಣದಲ್ಲಿ ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಭಾರತೀಯ ಮೂಲದ ವಿದ್ಯಾರ್ಥಿ ಪೊಲೆಂಡ್ ಗಡಿಯತ್ತ ಪ್ರಯಾಣ ಮಾಡುತ್ತಿರುವಾಗ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ವಾಪಾಸ್ ಕ್ಯಿವ್‍ಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
# ವಿದ್ಯಾರ್ಥಿಗಳ ಪರದಾಟ:
ಸಂಘರ್ಷ ಪೀಡಿತ ಪ್ರದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಪಾಡು ಹೇಳ ತೀರದಾಗಿದೆ. ಉಕ್ರೇನ್ ಅಧಿಕಾರಿಗಳು ರೈಲಿನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಕಾರು, ಬಸ್ ಪ್ರಯಾಣಕ್ಕೆ ಒಂದಕ್ಕಿಂತ ನಾಲ್ಕು ಪಟ್ಟು ವೆಚ್ಚ ದುಬಾರಿಯಾಗಿದೆ. ಕ್ವಿವ್‍ನಿಂದ ನೆರೆಯ ರಾಷ್ಟ್ರಗಳ ಗಡಿ ಪ್ರದೇಶಗಳು ಕನಿಷ್ಠ ಆರು ನೂರು ಕಿಲೋ ಮೀಟರ್ ನಿಂದ 1200 ಕಿಲೋ ಮೀಟರ್ ವರೆಗೂ ದೂರ ಇವೆ. ಅಷ್ಟು ದೂರು ಪ್ರಯಾಣಿಸಲು ಈವರೆಗೂ ಆರು ಹಿರ್ವಿನಿಯಾ (ಉಕ್ರೇನ್‍ನ ಕರೆನ್ಸಿ)ಗಳಷ್ಟಿದ್ದ ಶುಲ್ಕ ಏಕಾಏಕಿ ಎರಡು ಸಾವಿರಕ್ಕೆ ಏರಿಕೆಯಾಗಿದೆ.
ಒಂದು ವಾರದಿಂದ ಅಡುಗುತಾಣಗಳಲ್ಲಿ ಉಳಿದುಕೊಂಡು ದಿನನಿತ್ಯದ ವೆಚ್ಚಗಳನ್ನು ಭರಿಸಿಕೊಂಡು ಹಣ ಖಾಲಿ ಮಾಡಿಕೊಂಡಿರುವ ವಿದ್ಯಾರ್ಥಿಗಳು, ಪ್ರಯಾಣ ವೆಚ್ಚ ಭರಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ ಎನ್ನಲಾಗಿದೆ.
ಹೇಗಾದರೂ ಸರಿ ನೆರೆಯ ಗಡಿ ಭಾಗಕ್ಕೆ ಬನ್ನಿ, ಇಲ್ಲಿ ನಿಮಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುತ್ತೇವೆ ಎಂದು ಭಾರತ ಸರ್ಕಾರದ ಅಕಾರಿಗಳು ಹೇಳುತ್ತಿದ್ಧಾರೆ. ಆದರೆ ಉಕ್ರೇನಿಯರು ಹಣ ಕೊಟ್ಟರೆ ಮಾತ್ರ ವಾಹನ ಹತ್ತಿಸುವುದಾಗಿ ಹೇಳುತ್ತಿದ್ದಾರೆ. ಹಣದ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಭಾರತ ವಿಶ್ವಸಂಸ್ಥೆಯಲ್ಲಿ ತಟಸ್ಥ ನಿಲುವು ಅನುಸರಿಸಿ ರಷ್ಯ ಪರವಾಗಿದೆ ಎಂಬ ಕಾರಣಕ್ಕೆ ಮೊದಲೇ ಉಕ್ರೇನಿಯರು ಭಾರತೀಯ ವಿದ್ಯಾರ್ಥಿಗಳ ಮೇಲೆ ಅಸಹನೆ ಹೊಂದಿದ್ದಾರೆ. ರೈಲುಗಳನ್ನು ಹತ್ತಿಸಿಕೊಳ್ಳದೆ ಕೆಳಗೆ ಇಳಿಸುತ್ತಿದ್ದಾರೆ. ಪ್ಲಿಸ್ ನಮ್ಮನ್ನು ಕರೆದುಕೊಂಡು ಹೋಗಿ ಎಂದು ವಿದ್ಯಾರ್ಥಿಗಳು ಉಕ್ರೇನ್ ಅಕಾರಿಗಳ ಬಳಿ ಅಂಗಲಾಚುತ್ತಿರುವ ವಿಡಿಯೋಗಳು ಮನಕಲಕುತ್ತಿವೆ.
ಬಹುತೇಕ ದೇಶಗಳ ರಾಯಭಾರ ಕಚೇರಿಗಳು ಈ ಕ್ಷಣದವರೆಗು ಕ್ಯಿವ್ ನಲ್ಲೇ ಇವೆ. ಮೊಟ್ಟ ಮೊದಲ ಬಾರಿಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಫಲಾಯನ ಮಾಡಿ, ನೆರೆಯ ಗಡಿ ರಾಷ್ಟ್ರಗಳಲ್ಲಿ ಕುಳಿತು ಇಲ್ಲಿಗೆ ಬನ್ನಿ ಎಂದು ವಿದ್ಯಾಥಿಗಳಿಗೆ ಸೂಚನೆ ನೀಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
