ನವದೆಹಲಿ,ಮಾ.3- ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳು ಪ್ರಾಣಾಪಾಯ ಎದುರಿಸುತ್ತಿದ್ದು, ಸ್ಥಳೀಯರು ದೌರ್ಜನ್ಯವೆಸಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ಹಾಗೂ ನಾಗರಿಕರು ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಹಾಗೂ ವ್ಯಾಪಾರ ಇತರ ಕಾರಣಗಳಿಂದಾಗಿ ನೆಲೆಸಿದ್ದರು.
ಯುದ್ಧ ಶುರುವಾದ ಬಳಿಕ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಗಳು ನೀಡಿದ ಸೂಚನೆ ಆಧರಿಸಿ ಸುಮಾರು 17 ಸಾವಿರ ಮಂದಿ ಉಕ್ರೇನ್ ತೊರೆದು ನೆರೆಯ ರಾಷ್ಟ್ರಗಳಿಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಬಾಕಿ ಉಳಿದ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಉಕ್ರೇನ್ ಬಿಟ್ಟು ಹೊರ ಬರುವಂತೆ ಪದೇ ಪದೇ ಸೂಚನೆಗಳನ್ನು ನೀಡಲಾಗುತ್ತಿದೆ.
# ಪ್ರಧಾನಮಂತ್ರಿ ಮಾತುಕತೆ:
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಂಭಾಷಣೆ ನಡೆಸಿದ ಪ್ರಯುಕ್ತ ಮಧ್ಯಾಹ್ನದಿಂದ ಸಂಜೆ 6 ಗಂಟೆವರೆಗೂ ಖರ್ಕಿವ್ ನಗರದ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಿದ್ದವು.
ಈ ವೇಳೆ ಲಭ್ಯವಿದ್ದ ವಾಹನಗಳು ಅಥವಾ ನಡೆದಾದರೂ ಸರಿ ನಗರ ಬಿಟ್ಟು ಹೊರ ಬರುವಂತೆ ಭಾರತೀಯ ರಾಯಭಾರ ಕಚೇರಿ ತನ್ನ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಖರ್ಕಿವ್‍ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಸೇರಿ ಬಹಳಷ್ಟು ದೇಶಗಳ ವಿದ್ಯಾರ್ಥಿಗಳು ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ.
ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಅವೇಶನದಲ್ಲಿ ರಷ್ಯಾವನ್ನು ಬೆಂಬಲಿಸಿದೆ. ಇದು ಉಕ್ರೇನಿಯರನ್ನು ಕೆರಳಿಸಿದ್ದು, ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ರೈಲುಗಳಲ್ಲಿ ಪ್ರಯಾಣಿಸಲು ಭಾರತೀಯರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ತೀವ್ರ ಶೀತದ ವಾತಾವರಣ ಮತ್ತು ಕೊರೆಯುವ ಚಳಿಯಲ್ಲಿ 2-3 ದಿನಗಳಿಂದಲೂ ಸರಿಯಾದ ಆಹಾರ, ನೀರು, ನಿದ್ರೆ ಇಲ್ಲದೆ ಬಳಲುತ್ತಿದ್ದಾರೆ.
ಸಂಚರಿಸುತ್ತಿರುವ ರೈಲುಗಳು ಉಕ್ರೇನಿಯರನ್ನು ಮಾತ್ರ ಹತ್ತಿಸಿಕೊಳ್ಳುತ್ತಿದ್ದು, ಭಾರತಿಯರನ್ನು ಕೆಳಗೆ ತಳ್ಳುತ್ತಿರುವುದಾಗಿ ವರದಿ ಯಾಗುತ್ತಿವೆ. ಖಾಸಗಿ ವಾಹನಗಳಲ್ಲಿ ಸಂಚರಿಸಲು ಸೆಲ್ ದಾಳಿ ಹಾಗೂ ದುಬಾರಿ ವೆಚ್ಚ ವಿದ್ಯಾರ್ಥಿಗಳನ್ನು ಕಂಗೆಡಿಸಿದೆ.
ಈ ನಡುವೆ ಉಕ್ರೇನಿಯರು ಭಾರತೀಯರನ್ನು ರಷ್ಯಾ ದಾಳಿಗೆ ಎದುರಾಗಿ ಮಾನವ ಕವಚಗಳನ್ನಾಗಿ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿಯೂ ಆರೋಪವಿದೆ. ಆದರೆ, ಭಾರತೀಯ ರಾಯಭಾರಿ ಕಚೇರಿ ಇದನ್ನು ತಳ್ಳಿ ಹಾಕಿದೆ.
ಉಕ್ರೇನಿನಲ್ಲಿ ಇರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ. ಯುದ್ಧ ಪೀಡಿತ ಪ್ರದೇಶದಲ್ಲಿರುವ ಭಾರತೀಯರನ್ನು ಈವರೆಗೂ ಒತ್ತೆಯಾಳಾಗಿ ಇರಿಸಿಕೊಂಡಿರುವ ಮಾಹಿತಿ ಇಲ್ಲ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
