ನವದೆಹಲಿ,ಮಾ.7-ಪ್ಯಾಲೇಸ್ತಾನ್‍ನಲ್ಲಿರುವ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರು ಶವವಾಗಿ ಪತ್ತೆಯಾಗಿದ್ದಾರೆ. ರಮಲ್ಲಾದಲ್ಲಿರುವ ಅವರ ಕಚೇರಿಯಲ್ಲಿ ಆರ್ಯ ಅವರು ಶವವಾಗಿ ಪತ್ತೆಯಾಗಿದ್ದು, ಅವರ ಸಾವಿಗೆ ನಿಖರ ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ.
2008 ರ ಬ್ಯಾಚ್‍ನ ಐಎಫ್‍ಎಸ್ ಅಧಿಕಾರಿಯಾಗಿರುವ ಅಕಾಲಿಕ ಸಾವು ನೋವು ತಂದಿದೆ. ಅತ್ಯಂತ ದಕ್ಷ ಅಧಿಕಾರಿಯಾಗಿದ್ದ ಆರ್ಯ ಅವರ ಸೇವೆ ಎಂದೆಂದಿಗೂ ಅಜರಾಮರ ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವಿಟ್ ಮಾಡಿದ್ದಾರೆ. ದೆಹಲಿ ಮೂಲದ ಆರ್ಯ ಅವರು ಮಾಸ್ಕೋ ಮತ್ತು ಕಾಬೂಲ್‍ನಲ್ಲಿ ಭಾರತದ ರಾಯಭಾರಿ ಕಚೇರಿಗಳಲ್ಲಿ ಹಾಗೂ ಪ್ಯಾರಿಸ್‍ನಲ್ಲಿರುವ ಯುನೆಸ್ಕೋದ ಶಾಶ್ವತ ನಿಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿ ಆರ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪ್ಯಾಲೇಸ್ತಾನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಮತ್ತು ಪ್ರಧಾನ ಮಂತ್ರಿ ಮುಹಮ್ಮದ್ ಸ್ತಾಯೇಬ್ ತಿಳಿಸಿದ್ದಾರೆ. ಇದರ ಜತೆಗೆ ಆರ್ಯ ಅವರ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚುವಂತೆಯೂ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
