ದೇಶದ ಸಮಗ್ರತೆ ವಿಷಯದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ: ರಾಹುಲ್ ಗಾಂಧಿ
ನವದೆಹಲಿ, ಮೇ 20- ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆ ವಿಷಯದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತ ಪಡಿಸಿದ್ದು, ಪ್ರಧಾನಿಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಲಡಾಖ್ನ ಪೂರ್ವದಲ್ಲಿ ಪ್ಯಾಂಗೊಂಗ್ ತ್ಸೋ ಸರೋವರದ ಮೇಲೆ ಚೀನಾ ಎರಡನೇ ಸೇತುವೆ ನಿರ್ಮಿಸುವ ವರದಿಗಳ ನಂತರ ಪ್ರತಿಕ್ರಿಯಿಸಿರುವ ರಾಹುಲ್ಗಾಂಧಿ, ಪೂರ್ವ ಲಡಾಖ್ನ ಆಯಕಟ್ಟಿನ ಪ್ರಮುಖವಾದ ಪ್ಯಾಂಗೊಂಗ್ ತ್ಸೋ ಸರೋವರದ ಸುತ್ತಲೂ ಚೀನಾ ಎರಡನೇ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ಉಪಗ್ರಹ ಚಿತ್ರಣ ಆಧರಿಸಿ ವರದಿಯಾಗಿದೆ.
ಇದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಚೀನಾ ಈ ಪ್ರದೇಶದಲ್ಲಿ ತನ್ನ ಸೈನ್ಯವನ್ನು ಗಡಿಯಲ್ಲಿ ತ್ವರಿತವಾಗಿ ಜಮಾವಣೆ ಮಾಡಲು ಅನುಕೂಲ ಮಾಡಿಕೊಳ್ಳುತ್ತಿದೆ. ಎರಡು ವರ್ಷಗಳ ಹಿಂದೆ ಪೂರ್ವ ಲಡಾಖ್ನಲ್ಲಿ ನಡೆದ ಎರಡು ರಾಷ್ಟ್ರಗಳ ಮಿಲಿಟರಿಗಳ ನಡುವೆ ಹಲವು ಘರ್ಷಣೆಗಳಿಂದ ಭಾರತ ಮತ್ತು ಚೀನಾದ ನಡುವೆ ದೀರ್ಘಕಾಲದ ಬಿಕ್ಕಟ್ಟು ನಿರ್ಮಾಣವಾಗಿತ್ತು. ಈ ನಡುವೆ ಸೇತುವೆ ನಿರ್ಮಿಸಲಾಗುತ್ತಿದೆ. ಚೀನಾ ಪ್ಯಾಂಗೊಂಗ್ನಲ್ಲಿ ಮೊದಲ ಸೇತುವೆಯನ್ನು ನಿರ್ಮಿಸಿದೆ.
ಚೀನಾ ಪ್ಯಾಂಗಾಂಗ್ನಲ್ಲಿ ಮೊದಲನೇ ಸೇತುವೆ ನಿರ್ಮಿಸಿದಾಗ ಭಾರತ ಸರ್ಕಾರ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದಿತ್ತು. ಎರಡನೇ ಸೇತುವೆಯನ್ನು ನಿರ್ಮಿಸುವಾಗಲು ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಎಂದು ಹೇಳುತ್ತಿದೆ. ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯಲ್ಲಿ ರಾಜಿ ಸಂಧಾನ ಸಲ್ಲ ಎಂದು ಟ್ವೀಟ್ನಲ್ಲಿ ರಾಹುಲ್ ಪ್ರತಿಕ್ರಿಯಿಸಿದ್ದಾರೆ. ಅಂಜುಬುರುಕ ಮತ್ತು ವಿಧೇಯ ಪ್ರತಿಕ್ರಿಯೆ ಸರಿಯಲ್ಲ. ಪ್ರಧಾನಿ ಮೋದಿ ರಾಷ್ಟ್ರವನ್ನು ರಕ್ಷಿಸಲು ದಿಟ್ಟ ನಿಲುವು ಪ್ರದರ್ಶಿಸಬೇಕು ಎಂದು ಅವರ ಆಗ್ರಹಿಸಿದ್ದಾರೆ.