ನವದೆಹಲಿ,ಜು.31-ಭಾರತದ ಸ್ಥಳೀಯ ಉತ್ಪಾದನೆ ಉತ್ತೇಜನಕಾರಿ ಕ್ರಮಗಳು ಫಲ ನೀಡಿದ್ದು, ದೇಶೀಯ ಆಟಿಕೆ ಮಾರುಕಟ್ಟೆ ರಫ್ತು 2600 ಕೋಟಿಗೆ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ 91ನೇ ಸರಣಿಯಲ್ಲಿ ಮಾತನಾಡಿದ ಅವರು, ಭಾರತ ಆಟಿಕೆಗಳ ರಫ್ತಿನಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿದೆ. ಆಟಿಕೆಗಳ ಆಮದು ಶೇ.70ರಷ್ಟು ಕುಸಿದಿದೆ. ಈ ನಡುವೆ ರಫ್ತು ಹೆಚ್ಚಾಗಿದ್ದು, 300, 400 ಕೋಟಿ ರೂ.ಗಳಿದ್ದ ವಹಿವಾಟು 2600 ಕೋಟಿಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದರು.
ಭಾರತೀಯ ಆಟಿಕೆ ತಯಾರಕರು ಪೌರಾಣಿಕ, ಐತಿಹಾಸಿಕ ಮತ್ತು ಸಾಂಸ್ಕøತಿಕ ಆಧಾರಿತ ಆಟಿಕೆಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಆಟಿಕೆ ತಯಾರಿಕೆಗಳ ಕ್ಲಸ್ಟರ್ಗಳು ದೇಶದ ಎಲ್ಲೆಡೆ ಕಾಣಸಿಗುತ್ತದೆ. ಸಣ್ಣ ಉದ್ದಿಮೆದಾರರು ಬೃಹತ್ ಲಾಭ ಮಾಡುತ್ತಿದ್ದಾರೆ. ವಿಶ್ವದ ಹಲವು ಭಾಗಗಳೊಂದಿಗೆ ಇವರು ವ್ಯಾಪಾರ-ವಹಿವಾಟು ಸಂಪರ್ಕ ಹೊಂದುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಕಾಲದಲ್ಲಿ ಆಟಿಕೆಗಳ ಉತ್ಪಾದನೆ ತೀವ್ರವಾಗಿ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆ 3000 ಕೋಟಿ ರೂ.ಗಳಿಗೆ ಅಭಿವೃದ್ಧಿಯಾಗಿದೆ. ಯುವ ಉದ್ಯಮಿಗಳು ಆಟಿಕೆ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಯಾರು ಊಹಿಸಲಾಗದಷ್ಟು ಅಭಿವೃದ್ಧಿಯತ್ತ ಹೆಜ್ಜೆ ಹಾಕಿದ್ದೇವೆ. ಭಾರತ ಸ್ವಂತ ಪರಿಶ್ರಮದ ಮೂಲಕ ತೀವ್ರವಾದ ಪರಿವರ್ತನೆ ಹೊಂದಲು ಸಾಧ್ಯ ಎಂಬುದನ್ನು ಈ ಬೆಳವಣಿಗೆ ಸಾಕ್ಷೀಕರಿಸಿದೆ ಎಂದು ಹೇಳಿದರು.