ಭೌಗೋಳಿಕ ಸಂಘರ್ಷದಲ್ಲಿ ಚೀನಾದಿಂದ ಭಾರತಕ್ಕೆ ಗಂಭೀರ ಎಚ್ಚರಿಕೆ

Social Share

ವಾಷಿಂಗ್ಟನ್, ಫೆ.12- ಅಮೆರಿಕಾ ಬಿಡುಗಡೆ ಮಾಡಿರುವ ಇಂಡೋ-ಫೆಸಿಫಿಕ್ ಕಾರ್ಯತಂತ್ರ ವರದಿಯಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಭಾರತ ಚೀನಾದಿಂದ ಗಂಭೀರವಾದ ಭೌಗೋಳಿಕ ಸವಾಲುಗಳನ್ನು ಎದುರಿಸಲಿದೆ ಎಂದು ಎಚ್ಚರಿಸಲಾಗಿದೆ.
ಕ್ವಾಡ್ ಮಿನಿಸ್ಟ್ರಿಯಲ್ ಶೃಂಗದಲ್ಲಿ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕಾ ವಿದೇಶಾಂಗ ಸಚಿವರು ಭಾಗಿಯಾಗಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಡೋ-ಪೆಸಿಫಿಕ್ ನಲ್ಲಿ ಪ್ರಭಾವದ ವಲಯವನ್ನು ಹೆಚ್ಚಿಸಿಕೊಳ್ಳಲು ಚೀನಾ ತನ್ನ ಆರ್ಥಿಕ, ರಾಜತಾಂತ್ರಿಕ, ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯನ್ನು ಸಂಯೋಜಿಸುತ್ತಿದೆ.
ವಿಶ್ವದ ಅತ್ಯಂತ ಪ್ರಭಾವಶಾಲಿ ಹಾಗೂ ಶಕ್ತಿಯಾಗಲು ಪ್ರಯತ್ನಿಸುತ್ತಿದೆ ಎಂದು ಆಕ್ಷೇಪಿಸಲಾಗಿದೆ. ಚೀನಾದ ದಬ್ಬಾಳಿಕೆ ಮತ್ತು ಆಕ್ರಮಣವು ಜಗತ್ತಿನಾದ್ಯಂತ ವ್ಯಾಪಿಸಿದೆ, ಆದರೆ ಇದು ಇಂಡೋ-ಪೆಸಿಫಿಕ್ ನಲ್ಲಿ ಹೆಚ್ಚು ತೀವ್ರವಾಗಿದೆ ಎಂದು ಕಾರ್ಯತಂತ್ರ ವರದಿ ಉಲ್ಲೇಖಿಸಿದೆ.
ಆಸ್ಟ್ರೇಲಿಯಾದ ಆರ್ಥಿಕ ದಬ್ಬಾಳಿಕೆಯಿಂದ ಹಿಡಿದು, ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ ನಡುವಿನ ಸಂಘರ್ಷದಿಂದ, ತೈವಾನ್ ಮೇಲೆ ಹೆಚ್ಚುತ್ತಿರುವ ಒತ್ತಡ ಮತ್ತು ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ನೆರೆಹೊರೆಯವರನ್ನು ಬೆದರಿಸುವಿಕೆಯವರೆಗೆ ರಿಪಬ್ಲಿಕ್ ಆಫ್ ಚೀನಾ ಹಾನಿಕಾರಕ ನಡವಳಿಕೆ ಅನುಸರಿಸುತ್ತಿದೆ. ತನ್ನ ದೋರಣೆಯಿಂದ ಚೀನಾ ಮಾನವ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ಕಾನೂನನ್ನು ದುರ್ಬಲಗೊಳಿಸುತ್ತಿದೆ. ನ್ಯಾವಿಗೇಷನ್ ಸ್ವಾತಂತ್ರ್ಯ, ಇಂಡೋ-ಪೆಸಿಫಿಕ್ ಸ್ಥಿರತೆ ಮತ್ತು ಸಮೃದ್ಧಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಲಾಗಿದೆ.
ಮುಂದಿನ ದಶಕದಲ್ಲಿ ಮಿತ್ರ ರಾಷ್ಟ್ರಗಳು ಮತ್ತು ಪಾಲುದಾರಿಕೆ ಪ್ರಾಂತ್ಯಗಳು ಸಾಮೂಹಿಕ ಪ್ರಯತ್ನಗಳ ಮೂಲಕ ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಜಗತ್ತಿಗೆ ಪ್ರಯೋಜನಕಾರಿ ಕೆಲಸಗಳನ್ನು ಮಾಡಲಿವೆ. ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮೌಲ್ಯಗಳ ಪಾಲನೆ ಮೂಲಕ 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೇವೆ. ಚೀನಾವನ್ನು ಬದಲಾಯಿಸುವುದು ನಮ್ಮ ಉದ್ದೇಶವಲ್ಲ, ಸಮತೋಲನ ವಾತಾವರಣ ನಿರ್ಮಿಸಲು ಆಧ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ.
ಅಧ್ಯಕ್ಷ ಜೋ ಬಿಡನ್ ನೇತೃತ್ವದ ಆಡಳಿತದ ಮೊದಲ ಪ್ರಾದೇಶಿಕ ಕಾರ್ಯತಂತ್ರದಲ್ಲಿ ನಿರ್ದಿಷ್ಟ ಅಂಶಗಳನ್ನು ಉಲ್ಲೇಖಿಸಲಾಗಿದೆ. ಇಂಡೋ-ಪೆಸಿಫಿಕ್ ವರದಿಯಲ್ಲಿ ಅಮರಿಕ ತನ್ನ ಸ್ಥಾನವನ್ನು ದೃಢವಾಗಿಸುವ ಪ್ರಯತ್ನ ನಡೆಸಿದೆ. ಲಂಗರು ಹಾಕಲು ಮತ್ತು ಸಮುದ್ರ ವ್ಯಾಪ್ತಿಯ ಪ್ರದೇಶವನ್ನು ಬಲಪಡಿಸಲು ಹಾಗೂ ಆ ಪ್ರಕ್ರಿಯೆಯಲ್ಲಿ ಭಾರತದ ಉದಯೋನ್ಮುಖ ನಾಯಕತ್ವವನ್ನು ಬೆಂಬಲಿಸುವುದಾಗಿ ಸ್ಪಷ್ಟ ಪಡಿಸಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಉತ್ತೇಜಿಸಲು ಅಮೆರಿಕಾ ಮತ್ತು ಭಾರತವು ಒಟ್ಟಾಗಿ ಪ್ರಾದೇಶಿಕ ಗುಂಪುಗಳ ಮೂಲಕ ಕೆಲಸ ಮಾಡುವ ಕಾರ್ಯತಂತ್ರದ ಪಾಲುದಾರಿಕೆಗೆ ನಮ್ಮ ಬೆಂಬಲ ಇದೆ. ಆರೋಗ್ಯ, ಬಾಹ್ಯಾಕಾಶ ಮತ್ತು ಸೈಬರ್ ಸ್ಪೆಸ್‍ನಂತಹ ಹೊಸ ಕ್ಷೇತ್ರಗಳಲ್ಲಿ ಸಹಯೋಗದ ಪ್ರಸ್ತಾಪ ಮಾಡಲಾಗಿದೆ. ಆರ್ಥಿಕ ಮತ್ತು ತಂತ್ರಜ್ಞಾನದ ಸಹಕಾರವನ್ನು ಹೆಚ್ಚಿಸುವುದು ತಮ್ಮ ಉದ್ದೇಶ ಎಂದು ಶ್ವೇತಭವನ ಹೇಳಿದೆ.
ಭಾರತವು ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದಲ್ಲಿ ಸಮಾನ ಮನಸ್ಕ ಪಾಲುದಾರ ದೇಶವಾಗಿದೆ, ಆಗ್ನೇಯ ಏಷ್ಯಾ ಭಾಗದಲ್ಲೂ ಸಕ್ರಿಯ ನಾಯಕತ್ವ ಹೊಂದಿದೆ. ಕ್ವಾಡ್ ಮತ್ತು ಇತರ ಪ್ರಾದೇಶಿಕ ವೇದಿಕೆಗಳ ಪ್ರೇರಕ ಶಕ್ತಿ ಮತ್ತು ಪ್ರಾದೇಶಿಕ ಬೆಳವಣಿಗೆ ಭಾರತ ಎಂಜಿನ್ ಆಗಿದೆ ಎಂದು ಶ್ವೇತಭವನ ಮೆಚ್ಚುಗೆಯ ಮಾತುಗಳನ್ನಾಡಿದೆ. ಇದರ ನಡುವೆ ಅಮೇರಿಕದ ಹಿರಿಯ ಅಧಿಕಾರಿಯೊಬ್ಬರು, ಭಾರತ ಎದುರಿಸುತ್ತಿರುವ ಮಹತ್ವದ ಸವಾಲುಗಳ ಕುರಿತು ಗಮನಸೆಳೆದಿದ್ದಾರೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾದ ನಡವಳಿಕೆ ಭಾರತದ ಮೇಲೆ ಪ್ರಭಾವ ಬೀರಿದೆ. ಪ್ರಜಾಪ್ರಭುತ್ವದ ಸಮಾನ ಮನಸ್ಕ ಹಾಗೂ ಸಮುದ್ರ ಸಂಪ್ರದಾಯವನ್ನು ಹೊಂದಿರುವ ದೇಶಗಳೊಂದಿಗೆ ಕೆಲಸ ಮಾಡಲು ಪ್ರಚಂಡ ಅವಕಾಶಗಳನ್ನು ಅಮೆರಿಕಾ ಎದುರು ನೋಡುತ್ತಿದೆ. ಜಾಗತಿಕ ಸಾಮಾನ್ಯ ಪ್ರಜ್ಞೆಯಿಂದ ಈ ಪ್ರದೇಶದಲ್ಲಿ ನಿರ್ಣಾಯಕ ಸಮಸ್ಯೆಗಳನ್ನು ಬಗೆ ಹರಿಸುವ ಅಗತ್ಯ ಇದೆ ಎಂದು ಅಮೆರಿಕಾದ ಅಧಿಕಾರಿ ಹೇಳಿದ್ದಾರೆ.
ಹೊಸ ಪ್ರಾದೇಶಿಕ ಕಾರ್ಯತಂತ್ರ ವರದಿ ಬಿಡುಗಡೆ ಮಾಡಿದ ಅಧಿಕಾರಿ ರಾಜಕೀಯ ಹೊರತಾಗಿ ಪ್ರಾಮಾಣಿಕ ಮಾತುಗಳನ್ನಾಡಿದ್ದು, ಇಂಟೋ-ಪೆಸಿಫಿಕ್ ಪ್ರದೇಶದಲ್ಲಿ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದಿದ್ದಾರೆ.

Articles You Might Like

Share This Article