400 ದಾಟಿತು ಇಂಡೋನೇಷ್ಯಾದ ಭೂಕಂಪ, ಸುನಾಮಿಯಲ್ಲಿ ಸತ್ತವರ ಸಂಖ್ಯೆ ..!

Tsunami--01

ಜಕಾರ್ತ, ಸೆ.29 (ಪಿಟಿಐ)- ದ್ವೀಪರಾಷ್ಟ್ರ ಇಂಡೋನೆಷ್ಯಾದ ಸುಲವೇಸಿ ದ್ವೀಪ ಪ್ರಾಂತ್ಯದ ಮೇಲೆ ಬಂದೆರಗಿದ ವಿನಾಶಕಾರಿ ಭೂಕಂಪ ಮತ್ತು ಸುನಾಮಿಯಿಂದಾಗಿ ಈವರೆಗೆ 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಈ ಭೀಕರ ಪ್ರಕೃತಿ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದು ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಸುಲವೇಸಿ ದ್ವೀಪದ ಪಲು ನಗರದಲ್ಲಿ ನಿನ್ನೆ ಸಂಭವಿಸಿದ ಭೂಕಂಪ ಹಾಗೂ ಆನಂತರ ಅಪ್ಪಳಿಸಿದ ಸುನಾಮಿ ಅಲೆಗಳಿಂದಾಗಿ ಸಾವು-ನೋವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಹೇಳಿದ್ಧಾರೆ. ರಾಜಧಾನಿ ಜಕಾರ್ತದ ಆಸ್ಪತ್ರೆಯೊಂದರ ವೈದ್ಯರೊಬ್ಬರು ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 30 ಮಂದಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. 12ಕ್ಕೂ ಹೆಚ್ಚು ಮಂದಿ ತಲೆ ಮತ್ತು ಮೂಳೆಗಳಿಗೆ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ ದಾಖಲಾಯಿತು. ಇದಾದ ನಂತರ 1.5 ಮೀಟರ್‍ಗಳ ಗರಿಷ್ಠ ಎತ್ತರಕ್ಕೆ ಸುನಾಮಿ ದೈತ್ಯ ಅಲೆಗಳು ಸುಮಾರು 3.50 ಲಕ್ಷ ಜನಸಂಖ್ಯೆ ಸುಲವೇಸಿ ದ್ವೀಪದ ಪಲು ಪಟ್ಟಣದ ಮೇಲೆ ಅಪ್ಪಳಿಸಿತು. ಡೊಂಗಲಾ ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ.ಸುನಾಮಿ ಅಲೆಗಳ ಆರ್ಭಟದಿಂದ ವಿದ್ಯುತ್ ಕಂಬಗಳು, ಮರಗಳು ಕುಸಿದು ಬಿದ್ದಿದ್ದು, ಈ ಪ್ರಾಂತ್ಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅನೇಕ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುದ್ದೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Sri Raghav

Admin