ಇಂದ್ರ ಜಾಲದಲ್ಲಿ ಸ್ಯಾಂಡಲ್‍ವುಡ್ ನಟ-ನಟಿಯರು, ಸಿಸಿಬಿ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಲಂಕೇಶ್

Spread the love

ಬೆಂಗಳೂರು, ಆ.31- ಸ್ಯಾಂಡಲ್‍ವುಡ್‍ನ 20ಕ್ಕೂ ಹೆಚ್ಚು ಖ್ಯಾತ ನಟ, ನಟಿಯರು ಮಾದಕ ದ್ರವ್ಯಕ್ಕೆ ದಾಸರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಪತ್ರಕರ್ತ ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ಮಾಫಿಯಾದ ಲಿಂಕ್ ಇದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಕನ್ನಡ ಚಿತ್ರರಂಗ ಬೆಚ್ಚಿ ಬಿದ್ದಿತ್ತು. ಹಲವಾರು ಖ್ಯಾತ ನಾಮರು ಚಿತ್ರರಂಗಕ್ಕೂ ಡ್ರಗ್ಸ್ ಮಾಫಿಯಾಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಅವರು ಕನ್ನಡದ ಹಲವಾರು ನಟ, ನಟಿಯರು ಮಾದಕ ದ್ರವ್ಯಕ್ಕೆ ದಾಸರಾಗಿದ್ದಾರೆ. ನನಗೆ ಪೊಲೀಸ್ ಭದ್ರತೆ ನೀಡುವುದಾದರೆ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದರು. ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಹೀಗಾಗಿ ಪೊಲೀಸರು ಇಂದ್ರಜಿತ್ ಹೇಳಿಕೆ ಆಧಾರದ ಮೇಲೆ ಸುಮೊಟೋ ಪ್ರಕರಣ ದಾಖಲಿಸಿಕೊಂಡು ಅವರಿಗೆ ನೋಟೀಸ್ ಜಾರಿ ಮಾಡಿತ್ತು.

ಪೊಲೀಸರ ಮುಂದೆ ಹಾಜರಾಗಿ ನಿಮ್ಮ ಬಳಿ ಇರುವ ಸಂಪೂರ್ಣ ಮಾಹಿತಿ ನೀಡುವಂತೆ ಸಿಸಿಬಿ ಪೆÇಲೀಸರು ನೋಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತಮ್ಮ ವಕೀಲರನ್ನು ಸಂಪರ್ಕಿಸಿ ಚರ್ಚೆ ನಡೆಸಿದ ನಂತರ ಇಂದ್ರಜಿತ್ ಲಂಕೇಶ್ ಅವರು ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿ ಇನ್‍ಸ್ಪೆಕ್ಟರ್ ಹಾಗೂ ಡಿಸಿಪಿ ರವಿಕುಮಾರ್ ಅವರ ಮುಂದೆ ಹೇಳಿಕೆ ನೀಡಿದ್ದಾರೆ.

ಕೆಲವರು ತಾಕತ್ತಿದ್ದರೆ ಪೊಲೀಸರ ಮುಂದೆ ಡ್ರಗ್ಸ್ ಸೇವಿಸುತ್ತಿರುವವರ ಹೆಸರು ಬಹಿರಂಗ ಪಡಿಸಲಿ ಎಂದು ಇಂದ್ರಜಿತ್ ಲಂಕೇಶ್‍ಗೆ ಸವಾಲು ಹಾಕಿದ್ದರು. ಈ ಸವಾಲಿಗೆ ಪ್ರತಿ ಸವಾಲು ಎನ್ನುವಂತೆ ಇಂದು ಸಿಸಿಬಿ ಪೊಲೀಸರ ಮುಂದೆ ಹಾಜರಾದ ಇಂದ್ರಜಿತ್ ಅವರು ವಿಚಾರಣೆ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಖ್ಯಾತ ನಟ, ನಟಿಯರು ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದು , ಅವರಿಗೆ ಕೆಲವು ರಾಜಕಾರಣಿಗಳ ಶ್ರೀರಕ್ಷೆ ಇದೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ನಶೆಯಲ್ಲಿ ತೇಲುತ್ತಿರುವ 20ಕ್ಕೂ ಹೆಚ್ಚು ನಟ, ನಟಿಯರ ಹೆಸರು, ಅವರು ಮಾದಕ ದ್ರವ್ಯ ಸೇವನೆಗೆಂದೇ ಪಾರ್ಟಿ ಮಾಡುತ್ತಿದ್ದ ಸ್ಥಳ ಮತ್ತು ಲೊಕೇಶನ್ ವಿವರಗಳನ್ನು ಲಂಕೇಶ್ ಪೆÇಲೀಸರಿಗೆ ನೀಡಿದ್ದಾರೆ ಎನ್ನಲಾಗಿದೆ.

ಇಂದ್ರಜಿತ್ ಅವರ ಈ ಹೇಳಿಕೆ ಕನ್ನಡ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಡ್ರಗ್ಸ್‍ಗೆ ದಾಸರಾಗಿರುವ ನಟ, ನಟಿಯರ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಶೀಲಿಸಿದ ನಂತರ ತೀವ್ರ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.

ಕೇವಲ ಕನ್ನಡ ಚಿತ್ರರಂಗದ ನಟ, ನಟಿಯರಲ್ಲದೆ ತೆಲುಗು , ತಮಿಳು ಚಿತ್ರರಂಗದ ಹಲವಾರು ಖ್ಯಾತನಾಮರು ನಿರಂತರವಾಗಿ ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯು ಹೊರ ಬಿದ್ದಿದೆ.

Facebook Comments