ಚುಚ್ಚುಮದ್ದಿನ ವ್ಯತಿರಿಕ್ತ ಪರಿಣಾಮದಿಂದ ವ್ಯಕ್ತಿ ಸಾವು

ಮಳವಳ್ಳಿ, ನ.22- ಚುಚ್ಚುಮದ್ದು ವ್ಯತಿರಿಕ್ತವಾದ ಪರಿಣಾಮ ದೇಹ ವಿಷಮಯವಾಗಿ ದಡಮಹಳ್ಳಿಯ. ವ್ಯಕ್ತಿಯೊಬ್ಬನು ಮೃತಪಟ್ಟಿರುವ ಘಟನೆ ನಡೆದಿದೆ.ತೊರೆಕಾಡನಹಳಿಯ ಶಿವಲಿಂಗೇಗೌಡ (58) ಮೃತ ದುರ್ದೈವಿ. ಮಂಗಳೂರು ಮೂಲದ ಕೃಷ್ಣಮೂರ್ತಿ 20 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ, ಜ್ವರದಿಂದ ಬಳಲುತ್ತಿದ್ದ ದಡಮಹಳಿಯ ಶಿವಲಿಂಗೇಗೌಡ ಭಾನುವಾರ ಸಂಜೆ ಕೃಷ್ಣಮೂರ್ತಿ ರವರಿಂದ ಜ್ವರಕ್ಕೆ ಚುಚ್ಚುಮದ್ದು ಪಡೆದಿದ್ದರು.

ಚುಚ್ಚುಮದ್ದು ಪಡೆದ ಸ್ಥಳದಲ್ಲಿ ಊತ ಕಾಣಿಸಿಕೊಂಡಿದೆ. ಸೋಮವಾರ ಆಸ್ಪತ್ರೆಗೆ ಪುನಃ ಭೇಟಿ ನೀಡಿ ವೈದ್ಯರಿಗೆ ತಿಳಿಸಿದಾಗ ಇದರಿಂದ ಏನು ತೊಂದರೆ ಆಗಲ್ಲ ಔಷಧಿ ಹಚ್ಚಿದರೆ ಗುಣವಾಗಲಿದೆ ಎಂದು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ನೋವು ತಾಳಲಾರದ ಶಿವಲಿಂಗೇಗೌಡ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ. ಶಿವಲಿಂಗೇಗೌಡ ರವರನ್ನು ಪರಿಶೀಲಿಸಿದ ಜಿಲ್ಲಾ ಆಸ್ಪತ್ರೆ ವೈದ್ಯರು ಚುಚ್ಚುಮದ್ದು ಪಡೆದ ಜಾಗ ವಿಷಯುಕ್ತ ವಾಗಿದ್ದು ಪೂರ್ತಿ ದೇಹಕ್ಕೆ ಹರಡುವ ಸಂಭವವಿದೆ ಎಂದು ಸಲಹೆ ನೀಡಿದ್ದಾರೆ.

ಪರಿಸ್ಥಿತಿ ಅರಿತು ಕುಟುಂಬದವರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ದೇಹಪೂರ್ತಿ ವಿಷಮಯವಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಮೃತ ಸಂಬಂಧಿ ನಂದೀಶ್ ಮಾತನಾಡಿ ಈ ವೈದ್ಯನ ಬಳಿ ಚಿಕುನ ಗುನ್ಯಾ, ಮಂಡಿ ನೋವು ಸೇರಿದಂತೆ ಇತರೆ ಖಾಯಿಲೆಗಳಿಗೆ ಚಿಕಿತ್ಸೆ ಪಡೆದರೆ ಶೀಘ್ರದಲ್ಲೇ ಉಪಶಮನ ಆಗಲಿದೆ ಎಂದು ದೂರದ ಗ್ರಾಮಗಳಿಂದ ಚಿಕಿತ್ಸೆ ಪಡೆಯಲು ನೂರಾರು ರೋಗಿಗಳು ಬರುತ್ತಾರೆ.

ನನ್ನ ಚಿಕ್ಕಪ್ಪನ ಪರಿಸ್ಥಿತಿ ಬೇರಾರಿಗೂ ಬಾರದಿರಲಿ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈತನ ಬಳಿ ವೃತ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ದೊರಕಿಲ್ಲ. ಅದ್ದರಿಂದ ಕ್ಲಿನಿಕ್ ಅನ್ನು ಮುಚ್ಚಿಸಲಾಗಿದ್ದು, ತನಿಖೆ ಮುಗಿಯುವವರೆಗೂ ಈತ ಯಾರಿಗೂ ಚಿಕಿತ್ಸೆ ನೀಡುವಂತಿಲ್ಲ ಎಂದು ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.