ಗಾಯಗೊಂಡ ಮರಿಯನ್ನು ಆಸ್ಪತ್ರೆಗೆ ಕರೆ ತಂದ ತಾಯಿಕೋತಿ..!
ಬಿಹಾರ, ಜೂ.9- ಗಾಯ ಗೊಂಡಿದ್ದ ತನ್ನ ಮರಿಯನ್ನು ಕೋತಿಯೊಂದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಬಿಹಾರದ ಸಾಸಾರಾಮ್ಸ್ ಸಾಹಜಮಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಾಹಜಮಾ ಪ್ರಾಂತ್ಯದಲ್ಲಿ ಕೋತಿಯೊಂದು ತನ್ನ ಮರಿಯೊಂದಿಗೆ ಹೋಗುತ್ತಿದ್ದಾಗ ಕೆಲವು ಬಾಲಕರು ಅವುಗಳನ್ನು ಕಲ್ಲುಗಳಿಂದ ಹೊಡೆದಿದ್ದಾರೆ. ಇದರಿಂದ ಕೋತಿ ಮರಿಯು ಗಾಯಗೊಂಡಿದೆ.
ಈ ಘಟನೆಯ ನಂತರ ಕೋತಿಯು ತನ್ನ ಮರಿಯೊಂದಿಗೆ ಅಲ್ಲೇ ಇದ್ದ ಡಾ. ಎಸ್.ಎಂ. ಅಹಮದ್ರ ಆಸ್ಪತ್ರೆಗೆ ಕರೆದೊ ಯ್ದಿದೆ. ಗಾಯಗೊಂಡ ಕೋತಿ ಮರಿಯ ಸ್ಥಿತಿಯನ್ನು ಕಂಡ ವೈದ್ಯ ಅಹಮದ್ ಅವರು ಮಾನವೀಯತೆಯಿಂದ ಚಿಕಿತ್ಸೆ ಮಾಡಿದ್ದಾರೆ.
ಮರಿಗೆ ಚಿಕಿತ್ಸೆ ಕೊಡಿಸಿದ ನಂತರ ಕೋತಿಯು ವೈದ್ಯರಿಗೆ ತನ್ನದೇ ಆದ ಶೈಲಿಯಲ್ಲಿ ಕೃತಜ್ಞತೆ ಸಲ್ಲಿಸಿ ಆಸ್ಪತ್ರೆಯಿಂದ ಹೊರ ನಡೆದಿದೆ. ಈ ಇಡೀ ದೃಶ್ಯವು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಕ್ಕೆ ಅಲ್ಲವೇ ಹೇಳುವುದು ತಾಯಿ ಪ್ರೀತಿಗಿಂತ ಬೇರೆ ಬೆಲೆ ಎಂದು.