ಸೆ.2ರಂದು ಐಎನ್‍ಎಸ್ ವಿಕ್ರಾಂತ್ ನೌಕಾಪಡೆಗೆ ಸೇರ್ಪಡೆ

Social Share

ನವದೆಹಲಿ,ಆ.25-ದೇಶೀ ನಿರ್ಮಿತ ವಿಮಾನ ಹೊತ್ತೊಯ್ಯಬಲ್ಲ ಐಎನ್‍ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ಸೆ.2ರಂದು ಭಾರತೀಯ ನೌಕಾ ಪಡೆಗೆ ಸೇರ್ಪಡೆಯಾಗಲಿದೆ. ನೌಕಾದಳದ ಉಪಾಧ್ಯಕ್ಷ ಹಾಗೂ ವೈಸ್ ಅಡ್ಮಿರಲ್ ಎಸ್.ಎನ್.ಗ್ರೋಮಡೆ ಅವರು ಇಂದು ಪ್ರತಿಕಾಗೋಷ್ಠಿಯಲ್ಲಿ ದೇಶಿ ನಿರ್ಮಿತ ನೌಕೆಯ ಬಗ್ಗೆ ಮಾಹಿತಿ ನೀಡಿದರು.

ಇದು ಮರೆಯಲಾಗದ ಕ್ಷಣಗಳಾಗಿವೆ. ಇಂಡೋ-ಫೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸಲು ಐಎನ್‍ಎಸ್ ವಿಕ್ರಾಂತ್ ಪ್ರಮುಖ ಪಾತ್ರ ವಹಿಸಲಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹಡಗಿನ 4 ಮತ್ತು 5ನೇ ಹಂತದ ಸಮುದ್ರಯಾನ ಯಶಸ್ವಿಯಾಗಿದೆ. ಸೆಪ್ಟೆಂಬರ್ 2ರಂದು ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೌಕಾದಳಕ್ಕೆ ಹಸ್ತಾಂತರಿಸಲಾಗುವುದು. ಪ್ರಧಾನಿ ನರೇಂದ್ರಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಡಗಿನಲ್ಲಿ 2300 ಕಂಪಾರ್ಟ್‍ಮೆಂಟ್‍ಗಳಿದ್ದು, 1700 ಸಿಬ್ಬಂದಿಗಳು ಉಳಿದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಮಹಿಳೆಯರ ವಿಶ್ರಾಂತಿಗಾಗಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ವಿಮಾನಗಳನ್ನು ಹೊತ್ತೊಯ್ಯಬಲ್ಲ ಈ ಹಡಗಿನ ಉದ್ದ 262 ಮೀಟರ್‍ಗಳಾಗಿದ್ದು, 62 ಮೀಟರ್ ಅಗಲವಿದೆ. 59 ಮೀಟರ್ ಎತ್ತರವಿದೆ. 28 ನಾಟಿಕಲ್ ಮೈಲಿ ವೇಗ ಹೊಂದಿದ್ದು, 7500 ನಾಟಿಕಲ್ ಮೈಲಿ ದೂರ ಕ್ರಮಿಸುವ ಸಾಮಥ್ರ್ಯ ಹೊಂದಿದೆ. 88 ಮೆಗಾವ್ಯಾಟ್ ವಿದ್ಯುತ್‍ನ ನಾಲ್ಕು ಗ್ಯಾಸ್ ಟ್ರೈಬನ್‍ಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

2007ರಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಕೊಚ್ಚಿನ್ ಶಿಪ್‍ಯಾರ್ಡ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ಮೂರು ಹಂತದಲ್ಲಿ ದೇಶಿ ಹಡಗು ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿತ್ತು. 2009ರ ಫೆಬ್ರವರಿಯಲ್ಲಿ ಹಡಗು ನಿರ್ಮಾಣಕ್ಕೆ ಚಾಲನೆ ದೊರೆತಿತ್ತು ಎಂದು ಅವರು ತಿಳಿಸಿದ್ದಾರೆ.

Articles You Might Like

Share This Article