ವಾಷಿಂಗ್ಟನ್, ಏ.2- ಇನ್ನೂ ಮೂರ್ನಾಲ್ಕು ವಾರ ಯುದ್ಧ ಮುಂದುವರೆಯಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಭಾರೀ ಏರಿಕೆಯಾಗಿದೆ.
ಅಮೆರಿಕದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಟ್ರಂಪ್ ಅವರು ಯುದ್ಧ ಸಧ್ಯಕ್ಕೆ ನಿಲ್ಲಲ್ಲ ಎಂದು ಹೇಳಿಕೆ ನೀಡಿದ ಕ್ಷಣದಿಂದಲೇ ತೈಲ ರಫ್ತು ಮಾಡುವ ಒಪೆಕ್ ರಾಷ್ಟ್ರಗಳ ಬ್ರೆಂಟ್ ಕಚ್ಚಾತೈಲದ ಬೆಲೆ 4.5% ಏರಿಕೆಯಾಗಿದೆ.
ಒಂದು ಬ್ಯಾರೆಲ್ (158 ಲೀಟರ್) ಕಚ್ಚಾ ತೈಲದ ದರ 106.42 ಡಾಲರ್‌ಗೆ (9,930 ರೂ.) ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ದರ ಶೇ,4ರಷ್ಟು ಏರಿಕೆಯಾಗಿ 104.24 ಡಾಲರ್‌ನಲ್ಲಿ (9,732 ರೂ.) ವ್ಯವಹಾರ ನಡೆಸುತ್ತಿದೆ.
ಈ ಮೊದಲು ಯುದ್ಧ ಶೀಘ್ರವೇ ಅಂತ್ಯಗೊಳ್ಳಬಹುದು ಎಂದು ಟ್ರಂಪ್ ಹೇಳಿದ್ದರಿಂದ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 99, 100 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರೆ, 98.71 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿತ್ತು. ಡಿಟ್ರಂಪ್ ಭಾಷಣದಲ್ಲಿ ಹೇಳಿದ್ದೇನು? ತೈಲ ಬೆಲೆ ಏರಿಕೆ ತಾತ್ಕಾಲಿಕ.
ಇರಾನ್ ನಡೆಸುತ್ತಿರುವ ಭೀಕರ ಭಯೋತ್ಪಾದನಾ ದಾಳಿಗಳು ವಾಣಿಜ್ಯ ತೈಲ ನೌಕೆಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ. ಅಮೆರಿಕದಲ್ಲಿ ತೈಲ ಮತ್ತು ಗ್ಯಾಸ್ ಬೆಲೆಗಳ ಏರಿಕೆಗೆ ಇರಾನ್‌ನ ಕ್ರೂರ ಆಡಳಿತವೇ ಕಾರಣ.ಯುದ್ಧವು ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಕೊನೆಗೊಳ್ಳಲಿದ್ದು, ಆ ನಂತರ ತೈಲ ಬೆಲೆಗಳು ಕಲ್ಲಿನಂತೆ ಕೆಳಕ್ಕೆ ಬೀಳಲಿವೆ ಎಂದು ಟ್ರಂಪ್ ಹೇಳಿದ್ದರು.
ಹಾರ್ಮುಜ್ ಜಲಸಂಧಿಯ ಮೂಲಕ ಬರುವ ತೈಲದ ಅಗತ್ಯ ಅಮೆರಿಕಕ್ಕಿಲ್ಲ. ಅಲ್ಲಿಂದ ತೈಲ ಪಡೆಯುವ ಇತರ ದೇಶಗಳೇ ಅದರ ರಕ್ಷಣೆಯ ಜವಾಬ್ದಾರಿ ಹೊರಬೇಕು. ತೈಲ ಬಿಕ್ಕಟ್ಟು ಎದುರಿಸುತ್ತಿರುವ ಮಿತ್ರರಾಷ್ಟ್ರಗಳು ತಮಗೆ ಬೇಕಾದ ತೈಲವನ್ನು ತಾವೇ ಹಾರ್ಮೋಜ್ ಜಲಸಂಧಿಯಿಂದ ಪಡೆದುಕೊಳ್ಳಲು ಧೈರ್ಯ ತೋರಬೇಕು.ಅಮೆರಿಕವು ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿರುವುದರಿಂದ, ಜಾಗತಿಕವಾಗಿ ತೈಲ ಬೆಲೆ ಏರಿಕೆಯಾದಾಗ ದೇಶಕ್ಕೆ ಆರ್ಥಿಕವಾಗಿ ಲಾಭವಾಗುತ್ತದೆ.
ಸೌದಿ ಅರೇಬಿಯಾ ಮತ್ತು ರಷ್ಯಾ ಎರಡನ್ನೂ ಸೇರಿಸಿದರೂ ಅವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ನಾವು ಉತ್ಪಾದಿಸುತ್ತಿದ್ದೇವೆ. ತೈಲದ ಕೊರತೆ ಎದುರಿಸುತ್ತಿರುವ ದೇಶಗಳು ಅಮೆರಿಕದಿಂದಲೇ ತೈಲ ಖರೀದಿಸಬಹುದು.ಒಂದು ವೇಳೆ ಇರಾನ್ ಶಾಂತಿ ಮಾತುಕತೆಗೆ ಬರದಿದ್ದರೆ ಮುಂದಿನ 2-3 ವಾರಗಳಲ್ಲಿ ಅಲ್ಲಿನ ತೈಲ ಕೇಂದ್ರಗಳು ಮತ್ತು ವಿದ್ಯುತ್ ಘಟಕಗಳ ಮೇಲೆ ಭೀಕರ ದಾಳಿ ನಡೆಸುತ್ತೇವೆ. ನಾವು ಇರಾನ್ ಅನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತೇವೆ ಎಂದು ಗುಡುಗಿದ್ದಾರೆ.
