“ಅಂತಾರಾಜ್ಯ ಗಡಿಗಳ ಬಂದ್ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ”

Social Share

ಬೆಳಗಾವಿ, ಜ.5- ಕೊರೊನಾ ಮತ್ತು ಓಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತಾರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಹಲವು ಕಾರ್ಯಕ್ರಮಕ್ಕಾಗಿ ಬಂದಿದ್ದ ಸಚಿವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಜ್ಯ ಗಡಿಗಳಲ್ಲಿ ರಾಜ್ಯದೊಳಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕಿತರು ಕಂಡುಬಂದರೆ ಅಂಥವರನ್ನು ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗುವುದು. ಉಳಿದಂತೆ ಅಂತಾರಾಜ್ಯ ಚಟುವಟಿಕೆ ಮತ್ತು ಓಡಾಟಗಳಿಗೆ ಮುಕ್ತ ಅವಕಾಶ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಪರಿಸ್ಥಿತಿ ಕೈಮೀರಿ ಹೋಗಬಾರದೆಂದು 15 ದಿನಗಳ ಮಟ್ಟಿಗೆ ಸರ್ಕಾರ ವಾರಾಂತ್ಯದ ಕಫ್ರ್ಯೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಲಾಕ್‍ಡೌನ್ ತಡೆಯುವುದೇ ಇದರ ಹಿಂದಿನ ಸದುದ್ದೇಶ. ಕಚೇರಿಗಳು ಸೇರಿದಂತೆ ಪಬ್, ಬಾರ್, ಚಿತ್ರಮಂದಿರ ಇತ್ಯಾದಿಗಳಲ್ಲಿ ಸಾಮಥ್ರ್ಯದ ಶೇ.50ರಷ್ಟು ಮಾತ್ರ ಜನ ಸೇರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಮುಂಜಾಗ್ರತಾ ಕ್ರಮಗಳ ಹಿಂದೆ ಮುಖ್ಯವಾಗಿ ಬೆಂಗಳೂರಿನಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತರುವ ಚಿಂತನೆ ಇದೆ. ಹೀಗಾಗಿಯೇ ಅಲ್ಲಿ ಎರಡು ವಾರಗಳ ಮಟ್ಟಿಗೆ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಇದರ ಜತೆಯಲ್ಲೇ 15 ರಿಂದ 18 ವರ್ಷದ ಯುವಜನರಿಗೂ ಕೊರೊನಾ ಲಸಿಕೆ ಹಾಕಲು ಆರಂಭಿಸಲಾಗಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಪಡಬೇಕಾಗಿಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.
ವೈದ್ಯಕೀಯ ಕಾಲೇಜುಗಳಲ್ಲೂ ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಕೊಡಲಾಗುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಸಜ್ಜುಗೊಳಿಸಲಾಗಿದೆ. ಹತ್ತು ದಿನಗಳ ನಂತರ ಮತ್ತೊಮ್ಮೆ ಸಮಾಲೋಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ನುಡಿದರು.

Articles You Might Like

Share This Article