ಚೆನ್ನೈ, ಸೆ. 4- ಹಾಲಿ ಚಾಂಪಿಯನ್ ಆಗಿದ್ದರೂ ಕೂಡ ನಾಯಕತ್ವದ ನಿರ್ಧಾರದಿಂದಾಗಿ 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‍ಕೆ ಮುಂದಿನ ಐಪಿಎಲ್ ಋತುವಿನಲ್ಲಿ ಚಾಂಪಿಯನ್ ಆಗಲು ಈಗಾಗಲೇ ರಣತಂತ್ರ ಹೆಣೆಯಲು ಸಜ್ಜಾಗಿದೆ.
ಇಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ಸಿಎಸ್‍ಕೆ ತಂಡದ ಸಿಇಒ ಕಾಸಿ ವಿಶ್ವನಾಥ್ ಅವರು ತಂಡದ ನಾಯಕತ್ವ ಹಾಗೂ ಮುಂಬರುವ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‍ನ ತಂಡದ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು.
2022ರ ಐಪಿಎಲ್ ನಡೆಯಲು ಒಂದು ದಿನ ಬಾಕಿ ಇರುವಾಗಲೇ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಆಗಿಸಿದ್ದ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವವನ್ನು ತೊರೆದಿದ್ದರಿಂದ ರವೀಂದ್ರಾ ಜಾಡೇಜಾಗೆ ನಾಯಕತ್ವವನ್ನು ವಹಿಸಲಾಯಿತು.
ಆದರೆ ತಂಡದ ಜಾಡೇಜಾರ ನಾಯಕತ್ವದಲ್ಲಿ ಸತತ ಸೋಲುಗಳನ್ನು ಕಂಡಾಗ ಮತ್ತೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವವನ್ನು ವಹಿಸಿದ ನಂತರ ತಂಡ ಉತ್ತಮ ಪ್ರದರ್ಶನ ನೀಡಿದರೂ ಕೂಡ ಪ್ಲೇಆಫ್‍ಗೇರುವಲ್ಲಿ ಎಡವಿತ್ತು. ಆದರೆ ಈ ಗೊಂದಲ ನಿವಾರಿಸಲೆಂದೇ ಸಿಎಸ್‍ಕೆ ತಂಡದ ನಾಯಕರಾಗಿ ಧೋನಿಯನ್ನೇ ಮುಂದುವರೆಸಲಿದ್ದೇವೆ ಎಂದು ಕಾಶಿ ವಿಶ್ವನಾಥ್ ಹೇಳಿದರು.
ಜಾಡೇಜಾ ನಡೆ ನಿಗೂಢ:
ಸಿಎಸ್‍ಕೆ ತಂಡ 4 ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಾಜಿ ನಾಯಕ ರವೀಂದ್ರಾ ಜಾಡೇಜಾರವರು ಮಂಡಳಿಯೊಂದಿಗೆ ಮುನಿಸಿಕೊಂಡಿರುವುದರಿಂದ 2023ರ ಐಪಿಎಲ್‍ನಲ್ಲಿ ಅವರ ನಡೆ ನಿಗೂಢವಾಗಿದೆ. ಒಂದು ಮೂಲದ ಪ್ರಕಾರ ರವೀಂದ್ರಾಜಾಡೇಜಾ ಸಿಎಸ್‍ಕೆ ತಂಡವನ್ನು ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ.