5ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡು ಇತಿಹಾಸ ಬರೆದ ಮುಂಬೈ

ದುಬೈ, ನ.11- ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್ 13ಕ್ಕೆ ತೆರೆ ಬಿದ್ದಿದ್ದು 2019ರ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ನಾಯಕ ರೋಹಿತ್ ಶರ್ಮಾ 5ನೆ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಐಪಿಎಲ್ ಆವೃತ್ತಿಯ ಆರಂಭದ ಋತುಗಳಲ್ಲೂ ಕಳಪೆ ಪ್ರದರ್ಶನ ತೋರಿದ್ದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಲಿಷ್ಠವಾಗಿ ಹರಳಿದ್ದು ಕಳೆದ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‍ನಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

2013,2015, 2017, 2019 ಹೀಗೆ ಬೆಸ ಸಂಖ್ಯೆಯ ಋತುವಿನಲ್ಲಿ ಮಾತ್ರ ರೋಹಿತ್ ಬಳಗ ಪ್ರಶಸ್ತಿ ಜಯಿಸುತ್ತದೆ ಎಂಬ ಮಾತನ್ನು ಸುಳ್ಳಾಗಿಸುವ ಮೂಲಕ ಸತತ 2ನೇ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಆಗುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನಂತರ ಈ ಸಾಧನೆ ಮಾಡಿದ 2ನೇ ತಂಡವೆಂಬ ಖ್ಯಾತಿ ಗಳಿಸಿದೆ.
ಮುಂಬೈ ಇಂಡಿಯನ್ಸ್ ಇದುವರೆಗೂ ಆಡಿದ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದಾಗ ಮಾತ್ರ ಜಯಿಸಿತ್ತು. ಆದರೆ ಇದೇ ಮೊದಲ ಬಾರಿಗೆ ದ್ವಿತೀಯ ಬ್ಯಾಟಿಂಗ್ ಮಾಡಿದಾಗಲೂ ತಂಡಕ್ಕೆ ಜಯಿಸುವ ಶಕ್ತಿ ಇದೆ ಎಂಬುದನ್ನು ಋತುವಾತುಗೊಳಿಸಿದೆ.

2020ರ ಐಪಿಎಲ್ ಫೈನಲ್‍ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಬ್ಯಾಟ್ಸ್‍ಮನ್‍ಗಳ ವೈಫಲ್ಯದ ನಡುವೆ ನಾಯಕ ಶ್ರೇಯಾಸ್À ಅಯ್ಯರ್ (65 ರನ್, 6 ಬೌಂಡರಿ, 2 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ರಿಷಭ್‍ಪಂತ್ (56ರನ್, 4 ಬೌಂಡರಿ, 2 ಸಿಕ್ಸರ್) ನೆರವಿದ್ದರೂ 156 ರನ್‍ಗಳ ಸಾಧಾರಣ ಮೊತ್ತ ಕಲೆ ಹಾಕಿದರು.ಮುಂಬೈ ಬೌಲರ್‍ಗಳಾದ ಬೌಲ್ಟ್ (3 ವಿಕೆಟ್), ಕಂಟ್ರಿ ನೇಲ್ (2 ವಿಕೆಟ್) ಅದ್ಭುತ ಬೌಲಿಂಗ್ ಪ್ರದರ್ಶಿಸಿದರು.

#ಈ ಗುರಿಯನ್ನು ಬೆನ್ನಟ್ಟಿದ
ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದರೂ ಡಿಕಾಕ್ (20 ರನ್, 3 ಬೌಂಡರಿ, 1 ಸಿಕ್ಸರ), ಸೂರ್ಯಕುಮಾರ್ ಯಾದವ್ (19 ರನ್,1 ಬೌಂಡರಿ, 1 ಸಿಕ್ಸರ್) ದೊಡ್ಡ ಮೊತ್ತ ಕಲೆ ಹಾಕಲು ಎಡವಿದರೂ ನಾಯಕ ರೋಹಿತ್ ಶರ್ಮಾ(68 ರನ್, 5 ಬೌಂಡರಿ, 4 ಸಿಕ್ಸರ್), ಇಶಾನ್‍ಕಿಷನ್ (33ರನ್, 3 ಬೌಂಡರಿ, 1 ಸಿಕ್ಸರ್) ನೆರವಿನಿಂದ 18.4 ಓವರ್‍ಗಳಲ್ಲಿ 157 ರನ್ ಗಳಿಸಿ ಗೆಲುವಿನ ಸಂಭ್ರಮ ಪಟ್ಟಿತು. ಡೆಲ್ಲಿ ಪರ ನೋರ್ಟೆ(2 ವಿಕೆಟ್) ಯಶಸ್ವಿ ಬೌಲರ್ ಆದರು.

#ಬೌಲರ್‍ಗಳಿಗೆ ಶಹಭಾಷ್‍ಗಿರಿ
ನಮ್ಮ ಬೌಲರ್‍ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದಲೇ ನಮ್ಮ ತಂಡ 5ನೆ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಆಗಿದೆ, ಗೆಲುವಿನ ಪೂರ್ವ ಶ್ರೇಯಸ್ಸು ಬೌಲರ್‍ಗಳಿಗೆ ಸಲ್ಲಬೇಕೆಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಪಂದ್ಯದ ಆರಂಭದ ಎಸೆತದಲ್ಲೇ ಅಪಾಯಕಾರಿಯಾಗಿದ್ದ ಡೆಲ್ಲಿ ಬ್ಯಾಟ್ಸ್‍ಮನ್ ಸ್ಟೋನಿಸ್ ವಿಕೆಟ್ ಪಡೆದ ವೇಗಿ ಟ್ರೆಂಟ್ ಬೌಲ್ಟ್ ನಂತರ ರಹಾನೆಗೆ ಪೆವಿಲಿಯನ್ ದಾರಿ ತೋರಿಸಿದರೆ, ಸ್ಪಿನ್ನರ್ ಜಯಂತ್ ಯಾದವ್, ಶಿಖರ್ ಧವನ್‍ರ ವಿಕೆಟ್ ಪಡೆಯುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 22 ರನ್‍ಗಳಿಗೆ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.

ಆರಂಭಿದಲ್ಲೇ ಡೆಲ್ಲಿ ಬ್ಯಾಟ್ಸ್‍ಮನ್‍ಗಳನ್ನು ಔಟ್ ಮಾಡಿ ಆ ತಂಡದ ಮೇಲೆ ಒತ್ತಡ ಹೇರಬೇಕೆಂದಿದ್ದೆವು ಆ ಕಾರ್ಯವನ್ನು ಬೌಲರ್‍ಗಳು ಸಮರ್ಥವಾಗಿ ನಿಭಾಯಿಸಿದರು ಅದ್ದರಿಂದಲೇ ಡೆಲ್ಲಿ ತಂಡವನ್ನು 156ಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದೆವು. ಟೂರ್ನಿಯುದ್ದಕ್ಕೂ ಬೂಮ್ರಾ, ಬೌಲ್ಟ್ ಸೇರಿದಂತೆ ಎಲ್ಲಾ ಬೌಲರ್‍ಗಳು ಉತ್ತಮ ಬೌಲಿಂಗ್ ಮಾಡಿದ್ದಾರೆ ಎಂದು ರೋಹಿತ್ ಶಹಬಾಸ್‍ಗಿರಿ ನೀಡಿದರು.

#2020ರ ಐಪಿಎಲ್ ತೃಪ್ತಿ ತಂದಿದೆ
ಐಪಿಎಲ್ ಚಾಂಪಿ ಯನ್ಸ್ ಆಗುವ ಅವಕಾಶ ಕೈ ಚೆಲ್ಲಿದರೂ ಕೂಡ 2020ರ ಐಪಿಎಲ್ ಸರಣಿ ತೃಪ್ತಿ ತಂದಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಾಸ್ ಅಯ್ಯರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿರ್ಣಾಯಕ ಪಂದ್ಯದ ಪವರ್‍ಪ್ಲೇನ್‍ನಲ್ಲೇ ನಾವು ಮೂವರು ಆಕ್ರಮಣಕಾರಿ ಆಟಗಾರರನ್ನು ಕಳೆದುಕೊಂಡಿದ್ದು ತಂಡದ ಮೇಲೆ ಒತ್ತಡ ಬೀರಿತು. ಆದರೆ ಮುಂಬೈ ಇಂಡಿಯನ್ಸ್ ಪವರ್‍ಪ್ಲೇನ್‍ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರು. ಮುಂಬೈ ಪವರ್‍ಪ್ಲೇನ್‍ನಲ್ಲಿ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದ್ದೇ ಆ ತಂಡಕ್ಕೆ ಪ್ರಮುಖ ಕಾರಣವಾಯಿತು.

ಅಂತಿಮ ಪಂದ್ಯದಲ್ಲಿ ನಮ್ಮ ಬೌಲರ್‍ಗಳು ಪವರ್‍ಪ್ಲೇನ್‍ನಲ್ಲಿ ಎಡವಿದರೂ ಇಡೀ ಋತುವಿನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ, ಕಗಸೊ ರಬಡಾ( 30 ವಿಕೆಟ್) ಪರ್ಪಲ್ ಕ್ಯಾಪ್‍ಗೆ ಪಾತ್ರರಾಗಿರುವುದು ಅವರ ಬೌಲಿಂಗ್ ಪ್ರದರ್ಶನಕ್ಕೆ ನಿದರ್ಶನವಾಗಿದೆ. ಮುಂದಿನ ಋತುವಿನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಅಯ್ಯರ್ ಹೇಳಿದರು.

#ದಾಖಲೆ ಬರೆದ ರೋಹಿತ್
ಐಪಿಎಲ್ ಆರಂಭಗೊಂಡಾಗಿನಿಂದಲೂ ಮುಂಬೈ ಆಟಗಾರ ರೋಹಿತ್ ಹಲವು ದಾಖಲೆಗಳನ್ನು ನಿರ್ಮಿಸುತ್ತಾ ಬಂದಿದ್ದು, ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ನೂತನ ಇತಿಹಾಸ ಸೃಷ್ಟಿಸಿದ್ದಾರೆ. 2008ರಲ್ಲಿ ಡೆಕ್ಕನ್ ಚಾರ್ಜಸ್ ಆಟಗಾರನಾಗಿದ್ದ ರೋಹಿತ್ 2009ರಲ್ಲಿ ಆ ತಂಡವನ್ನು ಚಾಂಪಿಯನ್ಸ್ ಆಗಿದ್ದರು. 2011ಕ್ಕೆ ಮುಂಬೈ ತಂಡ ಸೇರಿದ ಅವರು
ಐಪಿಎಲ್‍ನಲ್ಲಿ ತಾವಾಡಿದ 50ನೇ ಪಂದ್ಯ, 100ನೇ, 150ನೇ ಹಾಗೂ 200ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಏಕೈಕ ಬ್ಯಾಟ್ಸ್‍ಮನ್ ಆಗಿ ಗುರುತಿಸಿಕೊಂಡಿದ್ದಾರೆ.