ಬೆಂಗಳೂರು, ಮಾ.2- ರಾಜ್ಯದ ನೀರಾವರಿ ಯೋಜನೆಗಳಿಗೆ ಹಿಂದಿನ ಯಾವ ಸರ್ಕಾರವೂ ನೀಡದಷ್ಟು ಅನುದಾನವನ್ನು ನಮ್ಮ ಸರ್ಕಾರ ಬಜೆಟ್‍ನಲ್ಲಿ ಒದಗಿಸಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಿಗೆ ಮಾರ್ಚ್ 4ರಂದು ಮಂಡಿಸಲಿರುವ 2022-23ನೆ ಸಾಲಿನ ಬಜೆಟ್‍ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿಎಂ ಅವರಲ್ಲಿ ಮನವಿ ಮಾಡಲಾಗಿದೆ.
ಅನುದಾನದ ಜತೆಗೆ ಕಾಮಗಾರಿಗಳ ತ್ವರಿತ ಚಾಲನೆ, ಮುಳುಗಡೆಯಾಗುವ ಪ್ರದೇಶ ಹಾಗೂ ಜಮೀನುಗಳಿಗೆ ಪರಿಹಾರ, ಪುನರ್ವಸತಿ, ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ ಎಂದರು. ಎಲ್ಲ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಪ್ರವಾಹ ಹಾಗೂ ಕೋವಿಡ್‍ನಿಂದ ಅನುದಾನಕ್ಕೆ ಹಿನ್ನಡೆಯಾಗಿದ್ದು, ಅನುಷ್ಠಾನವಾಗಲಿಲ್ಲ ಎಂದು ಹೇಳಿದರು.
ಮೇಕೆದಾಟು, ಮಹಾದಾಯಿ ಹಾಗೂ ಕೃಷ್ಣಾಕೊಳ್ಳದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಗಳು ಸುಪ್ರೀಂಕೋರ್ಟ್‍ನಲ್ಲಿರುವುದರಿಂದ ಕೇಂದ್ರ ಹಾಗೂ ಸಿಡಬ್ಲ್ಯೂಸಿ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದೇವೆ. ನಾವು ಕಾಲಹರಣ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿರುವ ನದಿ ಜೋಡಣೆ ಯೋಜನೆಗಳ ಬಗ್ಗೆ ನಮ್ಮ ಪಾಲೆಷ್ಟು ಎಂದು ವಿವರ ಕೇಳಿದ್ದೇವೆ. ನಾವು ಅದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನದಿ ಜೋಡಣೆ ವಿಚಾರದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಮ್ಮ ವಿರುದ್ಧವೋ ಅಥವಾ ಕಾಂಗ್ರೆಸ್ ನಾಯಕತ್ವಕ್ಕಾಗಿಯೋ ಎಂಬುದನ್ನು ಸ್ಪಷ್ಟಪಡಿಸಬೇಕೋ ಎಂದು ಆಗ್ರಹಿಸಿದ ಅವರು, ಕಾಂಗ್ರೆಸ್‍ನಲ್ಲಿ ಅಧಿಕಾರ ನಡೆಸಿದವರು ಹಾಗೂ ಅನುಭವಿಗಳು ಕಾಂಗ್ರೆಸ್ ನಾಯಕರಾಗಿದ್ದು, ಪಾದಯಾತ್ರೆ ಯಾವುದಕ್ಕಾಗಿ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಸ್ಪಷ್ಟಪಡಿಸಬೇಕು ಎಂದರು. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿದೆ. ಯಾವುದಕ್ಕಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
