ಒಂದೇ ಉಡಾವಣೆಯಲ್ಲಿ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

Social Share

ಬೆಂಗಳೂರು,ಅ.23-ಇಂದು ಬೆಳಗ್ಗೆ ಯಶಸ್ವಿಯಾದ 36 ಉಪಗ್ರಹಗಳ ಉಡಾವಣೆ ಪ್ರಕ್ರಿಯೆ ಭವಿಷ್ಯ ಭಾರತದ ಸಂಪರ್ಕ ಜಾಲವನ್ನು ಮತ್ತಷ್ಟು ಸದೃಢಗೊಳಿಸುವ ವಿಶ್ವಾಸ ಮೂಡಿಸಿದೆ.

ಲಂಡನ್ ಮೂಲದ ಉಪಗ್ರಹ ಸಂವಹನ ಸಂಸ್ಥೆ ನೆಟ್‍ವರ್ಕ್ ಅಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್( ಒನ್ ವೆಬ್) ಇಸ್ರೋದೊಂದಿಗಿನ ವಾಣಿಜ್ಯ ಒಪ್ಪಂದ ಮತ್ತು ಉಪಗ್ರಹಗಳ ಉಡಾವಣೆ 2023ರ ವೇಳೆಗೆ ಭಾರತದ ಉದ್ದ ಮತ್ತು ಅಗಲದ ಸಂಪರ್ಕ ವ್ಯವಸ್ಥೆಯನ್ನು ದೃಢಗೊಳಿಸುವ ಬದ್ದತೆ ಹೊಂದಿದೆ ಎಂದು ಕಂಪನಿ ಹೇಳಿದೆ.

ಲಡಾಕ್‍ನಿಂದ ಕನ್ಯಾಕುಮಾರಿಯವರೆಗೂ, ಗುಜರಾತ್‍ನಿಂದ ಅರುಣಾಚಲ ಪ್ರದೇಶದವರೆಗೂ ಸುರಕ್ಷಿತ ಪರಿಹಾರಗಳನ್ನು ಒದಗಿಸುವ ಜೊತೆಗೆ ಉದ್ಯಮಿಗಳಿಗಷ್ಟೇ ಅಲ್ಲ ಗ್ರಾಮಗಳು, ನಗರ, ಪಟ್ಟಣ, ಶಾಲೆ ಸೇರಿದಂತೆ ದುರ್ಗಮ ಪ್ರದೇಶಗಳಿಗೂ ಅಂತರ್ಜಾಲ ಸೇವೆಯನ್ನು ತಲುಪಿಸಲು ಸಹಕಾರಿಯಾಗಲಿದೆ ಎಂದು ಒನ್ ವೆಬ್ ಹೇಳಿಕೊಂಡಿದೆ.

ಭಾರತಿ ಗ್ಲೋಬಲ್ ಉಪಗ್ರಹ ಉಡಾವಣೆಯಲ್ಲಿ ಬೃಹತ್ ಪಾಲುದಾರ ಸಂಸ್ಥೆಯಾಗಿದೆ. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‍ಎಸ್‍ಐಎಲ್), ಇಂಡಿಯನ್ ರಿಸರ್ಚ್ ಆಗ್ರನೈಜೇಷನ್ (ಐಆರ್‍ಒ), ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸಲಾದ 36 ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿದೆ.

ಇದು ಬಾಹ್ಯಕಾಶ ಕ್ಷೇತ್ರದ ಅತಿದೊಡ್ಡ ವಾಣಿಜ್ಯ ಕಾರ್ಯಾಚರಣೆಯಾಗಿದೆ. ಭಾನುವಾರ ಮಧ್ಯರಾತ್ರಿ 12.07ಕ್ಕೆ ಉಡಾವಣೆಗೊಂಡ ಉಪಗ್ರಹಗಳು ರಾಕೆಟ್‍ನಿಂದ ಯಶಸ್ವಿಯಾಗಿ ಬೇರ್ಪಟ್ಟು 1.15 ನಿಮಿಷದಲ್ಲಿ ನಿಗದಿತ ಕಕ್ಷೆಗೆ ಸೇರ್ಪಡೆಯಾಗಿದ್ದು, 36 ಉಪಗ್ರಹಗಳು ಸಿಗ್ನಲ್‍ನ್ನು ರವಾನಿಸಿವೆ.

ಇದು ಒನ್ ವೆಬ್ ಸಂಸ್ಥೆಯ 14ನೇ ಉಡಾವಣೆ ಕಾರ್ಯಾಚರಣೆಯಾಗಿದೆ. ಬಾಹ್ಯಾಕಾಶದಲ್ಲಿ ಈವರೆಗೂ 464 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ. 448 ಯೋಜಿತ ಕಡಿಮೆ ಅಂತರದಲ್ಲಿ ಉಪಗ್ರಹಗಳು ಕಾರ್ಯಾಚರಣೆ ನಡೆಸುತ್ತಿವೆ.

ಹೊಸ ಉಡಾವಣೆಗಳಿಂದ ವಿಶ್ವಾದ್ಯಂತ ವೇಗದ ಮತ್ತು ಗುಣಮಟ್ಟದ ಸಂಪರ್ಕ ವ್ಯವಸ್ಥೆಗೆ ಅನುಕೂಲವಾಗಿದೆ. ಇನ್ನು 4 ಉಪಗ್ರಹಗಳು ಉಡಾವಣೆಗೆ ಬಾಕಿ ಉಳಿದಿದ್ದು, 2023ರ ವೇಳೆಗೆ ಸಕ್ರಿಯಗೊಳ್ಳಲಿವೆ ಎಂದು ಒನ್ ವೆಬ್ ತಿಳಿಸಿದೆ.

ಸಂಸ್ಥೆಯ ಕಾರ್ಯ ನಿರ್ವಾಹಕ ಅಧ್ಯಕ್ಷ ಸುನೀಲ್ ಭಾರ್ತಿ ಮಿಥೆಲ್ ಅವರು ಯಶಸ್ವಿ ಕಾರ್ಯಚರಣೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಭಾರತದ ವ್ಯಾಪ್ತಿಯನ್ನು ವಿಸ್ತರಣೆ ಮಾಡಿರುವುದರಲ್ಲದೆ ದಕ್ಷಿಣ ಏಷ್ಯಾದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಣೆ ಮಾಡಿದೆ. ಭಾರತಕ್ಕೆ ಶತಕೋಟಿ ಡಾಲರ್ ವಹಿವಾಟನ್ನು ದೊರಕಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು ಎಲ್‍ವಿಎಂ3 ಜೊತೆ 36 ಉಪಗ್ರಹಗಳನ್ನು ಒನ್ ವೆಬ್ ಸಂಸ್ಥೆ ಯಶಸ್ವಿ ಉಡಾವಣೆ ಮಾಡಿರುವುದು ಜಾಗತಿಕ ಸಂಪರ್ಕ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಿದೆ ಎಂದಿದ್ದಾರೆ.

ಎಲ್‍ವಿಎಂ3 ಆತ್ಮನಿರ್ಭರ್ ಭಾರತದ ಉತ್ಕøಷ್ಟ ಉದಾಹರಣೆಯಾಗಿದ್ದು, ಜಾಗತಿಕ ವಾಣಿಜ್ಯ ಸೇವಾ ಮಾರಕಟ್ಟೆಯ ತುತ್ತತುದಿಯ ಸಂಪರ್ಕಕ್ಕೆ ವಿಸ್ತರಣೆಗೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎನ್‍ಎಸ್‍ಐಎಲ್ ಇಸ್ರೋ ಸಂಸ್ಥೆಯನ್ನು ಪ್ರಧಾನಿ ಅಭಿನಂದಿಸಿದ್ದಾರೆ.

Articles You Might Like

Share This Article