BIG NEWS : ಎಮಿಸ್ಯಾಟ್ ಸೇರಿ 29 ಉಪಗ್ರಹಗಳ ಯಶಸ್ವಿ ಉಡಾವಣೆ, ಇಸ್ರೋ ಮತ್ತೊಂದು ಸಾಧನೆ..!

ಶ್ರೀಹರಿಕೋಟ(ಆಂಧ್ರಪ್ರದೇಶ), ಏ.1- ವಿದ್ಯುತ್-ಅಯಸ್ಕಾಂತಿಯ ಬೇಹುಗಾರಿಕೆ ಉಪಗ್ರಹ ಎಮಿಸ್ಯಾಟ್ ಸೇರಿದಂತೆ ಒಟ್ಟು 29 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಯಶಸ್ಸು ಸಾಧಿಸಿದೆ.

ಎಮಿಸ್ಯಾಟ್ ಹಾಗೂ ಇತರ 28 ಪುಟ್ಟ ಉಪಗ್ರಹಗಳನ್ನು ಹೊತ್ತ ಇಸ್ರೋದ ಹೆಮ್ಮೆಯ ರಾಕೆಟ್ ಪಿಎಸ್‍ಎಲ್‍ವಿ-ಸಿ45 ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ದವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ 9.27ಕ್ಕೆ ಸರಿಯಾಗಿ ನಭಕ್ಕೆ ಚಿಮ್ಮಿತು.

ಎಮಿಸ್ಯಾಟ್ ಮತ್ತು ಇತರ ಉಪಗ್ರಹಗಳನ್ನು ಪೂರ್ವ ನಿಗದಿಯಂತೆ 3ಕಕ್ಷೆಗಳಲ್ಲಿ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗುವ ಮೂಲಕ ಮತ್ತೊಂದು ಪ್ರಥಮ ದಾಖಲೆ ಸೃಷ್ಟಿಸಿದೆ. ಬಾಹ್ಯಾಕಾಶದಲ್ಲಿ ಇತ್ತೀಚೆಗೆ ಕೆಳಮಟ್ಟದ ಆತಂಕಕಾರಿ ಉಪಗ್ರಹವೊಂದನ್ನು ಭಾರತದ ಉಪಗ್ರಹ ಧ್ವಂಸ ಕ್ಷಿಪಣಿ ಮಿಷನ್‍ಶಕ್ತಿ ಕಾರ್ಯಾಚರಣೆಯಲ್ಲಿ ಹೊಡೆದುರಿಳಿಸಿತ್ತು.

ಸ್ಪೋಟಗೊಂಡ ಉಪಗ್ರಹದ ತ್ಯಾಜ್ಯಗಳು ಅಂತರಿಕ್ಷದಲ್ಲಿ ಎಮಿಸ್ಯಾಟ್ ಉಪಗ್ರಹ ಕಕ್ಷೆ ಸೇರ್ಪಡೆಗೆ ಅಡ್ಡಿಯಾಗಲಿದೆ ಎಂಬ ಆತಂಕ ಉಂಟಾಗಿತ್ತು. ಆದರೆ ಯಾವುದೇ ಅಡಚಣೆಯಿಲ್ಲದೆ ಎಮಿಸ್ಯಾಟ್ ನಿಖರವಾಗಿ ಪೂರ್ವನಿಗದಿತ ಕಕ್ಷೆ ಸೇರುವಲ್ಲಿ ಯಶಸ್ಸಿಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಸಂತಸದಿಂದ ಹೇಳಿದ್ದಾರೆ.

ಅಂತರಿಕ್ಷದಲ್ಲಿ ಸೆಂಚುರಿ ಸೇರಿದಂತೆ ಹೊಸ ವಿಕ್ರಮಗಳನ್ನು ಸಾಧಿಸಿರುವ ಇಸ್ರೋ ಈ ಮಹತ್ವ ಸಾಧನೆಯೊಂದಿಗೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಪಿಎಸ್‍ಎಲ್-ಸಿ45 ಗಗನನೌಕೆಯನ್ನು ಉಡಾವಣೆಯೊಂದಿಗೆ ಮೂರು ಭಿನ್ನ  ಕಕ್ಷೆಗಳಲ್ಲಿ 29 ಉಪಗ್ರಹಗಳನ್ನು ಸೇರಿಸುವ ವಿಶ್ವದ ಪ್ರಪ್ರಥಮ ಪ್ರಯೋಗ ಇದಾಗಿದೆ ಎಂದು ಇಸ್ರೋ ಹೆಮ್ಮೆಯಿಂದ ಹೇಳಿದೆ.

ಪಿಎಸ್‍ಎಲ್-ಸಿ45 ಮೂಲಕ ಒಟ್ಟು 29 ಉಪಗ್ರಹಗಳನ್ನು ಗಗನಕ್ಕೆ ಚಿಮ್ಮಿಸಿದೆ. ಸುಧಾರಿತ ವಿದ್ಯುನ್ಮಾನ ಬೇಹುಗಾರಿಕೆ ಉಪಗ್ರಹ -ಎಮಿಸ್ಯಾಟ್ ಹಾಗೂ ವಿವಿಧ ದೇಶಗಳ ಇತರ 28ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

ಎಲೆಕ್ಟ್ರಾನಿಕ್ ಸ್ಪ್ಯೆ ಸ್ಯಾಟಲೈಟ್‍ನನ್ನು ಭಾರತ ರಕ್ಷಣಾ ಇಲಾಖೆಯ ಮುಖ್ಯ ಅಂಗ ಸಂಸ್ಥೆಯಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ)ಗಾಗಿ ವಿಶೇಷವಾಗಿ ನಿರ್ಮಿಸಲಾಗಿದೆ. ಇದು ಅಂತರಿಕ್ಷದಿಂದ ಶತ್ರು ವೈರಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣು ಎಂದು ಬಣ್ಣಿಸಲಾಗಿದೆ.

ಪಿಎಸ್‍ಎಲ್-ಸಿ45 ಮಾರ್ಚ್ 21ರಂದೇ ಉಡಾವಣೆಯಾಗಬೇಕಿತ್ತು. ಆಂತರಿಕ ತಾಂತ್ರಿಕ ವ್ಯವಸ್ಥೆ ಮತ್ತು ಇತರ ತಾಂತ್ರಿಕ ಕಾರಣಗಳಿಂದ ಉಡಾವಣೆ ವಿಳಂಬವಾಗಿತ್ತು.

ಪಿಎಸ್‍ಎಲ್-ಸಿ45 ಇಸ್ರೋದ ಪ್ರಥಮ ತ್ರಿ-ಕಕ್ಷೆ ಕಾರ್ಯಾಚರಣೆಯಾಗಿದೆ ಹಾಗೂ ಇದೇ ಮೊದಲ ಬಾರಿಗೆ ರಾಕೆಟ್‍ನ ನಾಲ್ಕನೆ ಹಂತದಲ್ಲಿ(ಪಿಎಸ್4) ಸೌರ ಘಟಕ ಬಳಸಲಾಗುತ್ತಿದೆ.

ಪಿಎಸ್‍ಎಲ್‍ವಿ ಇಸ್ರೋದ ಅತ್ಯಂತ ವಿಶ್ವಾಸರ್ಹ ರಾಕೆಟ್ 2008ರಲ್ಲಿ ಚಂದ್ರಯಾನ ಮತ್ತು 2013ರಲ್ಲಿ ಮಂಗಳಯಾನ ಯಶಸ್ವಿ ಕಾರ್ಯಾಚರಣೆಗೂ ಇದೇ ಗಗನನೌಕೆಯನ್ನು ಬಳಸಲಾಗಿತ್ತು.

ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ: ಇಸ್ರೋದ ಹೊಸ ಸಾಧನೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲೂ ಸೂಪರ್ ಪವರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.