ಕೈ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ

Social Share

ಚಿಕ್ಕಮಗಳೂರು, ನ.17- ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.10ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಚಿಕ್ಕಮಗಳೂರು ನಗರದ ಹೂವಿನ ಮಾರುಕಟ್ಟೆ ರಸ್ತೆಯಲ್ಲಿರುವ ಗಾಯತ್ರಿ ಶಾಂತೇಗೌಡರ ನಿವಾಸದ ಮೇಲೆ ದಾಳಿ ನಡೆಸಿದರು.ಯಾವುದೇ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ತಾವು ಬಂದ ವಾಹನಗಳ

ಮೇಲೆ ಐಟಿ ಅಧಿಕಾರಿಗಳು ಮದುವೆ ಬೋರ್ಡ್ ಹಾಕಿಕೊಂಡಿದ್ದರು. ಅಭಿನವ ವೆಡ್ಸ್ ದೀಪಿಕಾ ಎಂದು ಐಟಿ ಅಧಿಕಾರಿಗಳ ವಾಹನಗಳ ಮೇಲೆ ಬೋರ್ಡ್ ಇತ್ತು. ಒಟ್ಟು 10ಕ್ಕೂ ಹೆಚ್ಚು ವಾಹನಗಳಲ್ಲಿ ದಿಢೀರ್ ಆಗಮಿಸಿದ ಅಧಿಕಾರಿಗಳು ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೆಳ್ಳಂಬೆಳಗ್ಗೆ ಮನೆಗೆ ಬಂದ ಹಿನ್ನೆಲೆಯಲ್ಲಿ ಮನೆಗೇ ತಿಂಡಿ ತರಿಸಿಕೊಂಡು ತಿಂದು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ. ಇದಲ್ಲದೆ ಬೇಲೂರಿನಲ್ಲಿರುವ ಅವರ ಅಳಿಯನ ನಿವಾಸದ ಮೇಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಟಿ ದಾಳಿ ಹಿನ್ನೆಲೆಯಲ್ಲಿ ಗಾಯತ್ರಿ ಶಾಂತೇಗೌಡ ಮನೆಗೆ ತೆರಳುವ ಮಾರ್ಗವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಹೊಟೇಲ್ ಮಯೂರ ಪಕ್ಕದ ರಸ್ತೆಗೆ ವಾಹನಗಳು ಹೋಗದಂತೆ ಸಂಚಾರಿ ಪೊಲೀಸರು ಬ್ಯಾರಿಕೇಡ್ ಹಾಕಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು.

ಪ್ರತಿಭಟನೆ:

ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ಐಟಿ ದಾಳಿ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಪ್ರತಿಭಟನೆಗಿಳಿದರು.ಗಾಯತ್ರಿ ಶಾಂತೇಗೌಡ ನಿವಾಸದ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಐಟಿ ಅಧಿಕಾರಿಗಳು ಹಾಗೂ ಶಾಸಕ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಸರ್ಕಾರ ಐಟಿ ಅಧಿಕಾರಿಗಳ ಮೂಲಕ ಪ್ರಭಾವಿ ನಾಯಕರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದುರಾಡಳಿತ ನಡೆಸುತ್ತಿರುವ ಬಿಜೆಪಿ ಐಟಿ-ಇಡಿ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

#IT Raid, #CongressLeader, #GayatriShantegowda,

Articles You Might Like

Share This Article