ಬೆಂಗಳೂರು,ಜ.31- ತೆರಿಗೆ ವಂಚನೆ ಹಿನ್ನಲೆಯಲ್ಲಿ ಪ್ರಮುಖ 25ಕ್ಕೂ ಹೆಚ್ಚು ಆಭರಣ ಮಾಲೀಕರ ಅಂಗಡಿ ಮತ್ತು ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಚಿಕ್ಕಪೇಟೆ, ಜಯನಗರ, ಯಶವಂತಪುರ, ಬಸವನಗುಡಿ ಸೇರಿದಂತೆ 25ಕ್ಕೂ ಹೆಚ್ಚು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ತೆರಿಗೆ ವಂಚನೆ ಆರೋಪದ ಮೇಲೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬನಶಂಕರಿಯಲ್ಲಿರುವ ಪಾಶ್ರ್ವ ಫಾರ್ಮಾಸ್ಯುಟಿಕಲ್ ಮಾಲೀಕರಾಗಿರುವ ರಾಜೇಶ್ಕುಮಾರ್ ಜೈನ್ ಅವರ ಅಂಗಡಿ ಹಾಗೂ ಜಯನಗರದ ಮನೆ ಮೇಲೆ 15ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ತೆರಿಗೆ ವಂಚನೆ ಮಾಡಿರುವ ಕೆಲವು ದಾಖಲೆಗಳು ಪತ್ತೆಯಾಗಿದ್ದು ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಹತ್ತು ವರ್ಷಗಳಿಂದ ಪಾಶ್ರ್ವ ಫಾರ್ಮಾಸ್ಯುಟಿಕಲ್ ನಡೆಸಿರುವ ವಹಿವಾಟು, ಪಾವತಿಸಿರುವ ತೆರಿಗೆ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ರಾಜೇಶ್ಕುಮಾರ್ ಜೈನ್ ಕೋಟ್ಯಂತರ ರೂ. ತೆರಿಗೆ ವಂಚಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ರೀತಿ ಶಂಕರ್ಪುರಂನ ಉತ್ತಮ್ ಜೈನ್ ಪ್ಲಾಟ್ ಮೇಲೆ ದಾಳಿ ನಡೆಸಲಾಗಿದೆ. ಮೂರು ಇನ್ನೋವಾ ಕಾರುಗಳಲ್ಲಿ ಬಂದ 15ಕ್ಕೂ ಹೆಚ್ಚು ಅಧಿಕಾರಿಗಳು ಬೆಳಗ್ಗೆ 7 ಗಂಟೆಗೆ ಬಂದು ದಾಖಲೆಗಳನ್ನು ಪರಿಶೀಲಿಸಿದರು.
ಉತ್ತಮ್ ಜೈನ್ ಅವರಿಗೆ ಸೇರಿದಹರಿಹಂತ್ ಕಾಸ್ಟಲ್ ಅಪಾಟ್ರ್ಮೆಂಟ್, ಮೂರನೇ ಫೆÇ್ಲೀರ್ನ ಫ್ಲಾಟ್ ಮೇಲೂ ದಾಳಿ ನಡೆಸಿದ್ದು, ಈ ವೇಳೆ ಇಡೀ ಅಪಾರ್ಟ್ಮೆಂಟ್ನ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ.
ತೆರಿಗೆ ವಂಚನೆ ಆರೋಪದ ಮೇಲೆ ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಸೇರಿದಂತೆ ನಗರದ 25 ಕಡೆಗಳಲ್ಲಿ 300ಕ್ಕೂ ಹೆಚ್ಚು ಅಧಿಕಾರಿಗಳಿಂದ ಶೋಧ ಕಾರ್ಯ ನಡೆದಿದೆ. ದಾಳಿ ವೇಳೆ ಭದ್ರತೆಗಾಗಿ ಅಧಿಕಾರಿಗಳ ತಂಡ ಸಿಎಆರ್ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿತು.
#ITRaid, #JeweleryShops, #Bangalore,