ಶ್ರೀನಗರ,ಆ.8- ನಿಷೇಧಿತ ಸಂಘಟನೆಯ ಹೆಸರಿನಲ್ಲಿ ಉಗ್ರವಾದಿ ಚಟುವಟಿಕೆಗಳಿಗೆ ಹಣಕಾಸಿನ ಸಂಪನ್ಮೂಲ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ ಇಂದು ಕಣಿವೆ ರಾಜ್ಯದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ದೋಹ ಜಿಲ್ಲೆಯ ದಾರಾ-ಗುಂಡಾನ್, ಮುನ್ಸಿಮೊಹಲ್ಲಾ, ಅಕ್ರಮ್‍ಬಂದ್, ನಗ್ರಿನಹಿಬಸ್ತಿ , ಕರೋಟಿಬಗ್ವಾರ್, ತೆಲೆಲಾ, ಮಲೋತಿಬಲ್ಲ ಮತ್ತು ಜಮ್ಮುವಿನ ಬತಿಂದಿ ಪ್ರದೇಶಗಳಲ್ಲಿ ಈ ದಾಳಿ ನಡೆಸಲಾಗಿದೆ.
ಕಳೆದ ವರ್ಷ ಫೆ.5ರಂದು ಎನ್‍ಐಎ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಎಫ್‍ಐಆರ್ ಆಧರಿಸಿ ಕಾರ್ಯಾಚರಣೆ ನಡೆದಿದೆ. ಜಮಾತಿ-ಇ-ಇಸ್ಲಾಮಿಕ್ ಸಂಘಟನೆಯ ಪದಾಧಿಕಾರಿಗಳ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿದೆ. ಈ ಸಂಘಟನೆಯ ಕಾರ್ಯಕರ್ತರು ದತ್ತಿ ಹಾಗೂ ಸಾಮಾಜಿಕ ಚಟುವಟಿಕೆಗಳ ಹೆಸರಿನಲ್ಲಿ ನಿಧಿ ಸಂಗ್ರಹ ಮಾಡಿ ಅದನ್ನು ಪ್ರತ್ಯೇಕವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಘಟನೆಗಳಿಗೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಜಮಾತಿ-ಇ-ಇಸ್ಲಾಮಿಕ್ ಸಂಘಟನೆ ಉಗ್ರ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ 2019ರ ಫೆಬ್ರವರಿಯಲ್ಲಿ ಐದು ವರ್ಷ ನಿಷೇಧಕ್ಕೊಳಗಾಗಿತ್ತು. ಸಂಘಟನೆಯ ಚಟುವಟಿಕೆಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಯುಎಪಿಎ ಕಾಯ್ದೆಯಡಿ ನೋಟಿಸ್ ನೀಡಿ ಚಟುವಟಿಕೆಗಳನ್ನು ನಿಗ್ರಹಿಸಲು ಆದೇಶಿಸಿದ್ದರು.
ನೂರಾರು ಮುಖಂಡರು ಬಂಧನಕ್ಕೊಳಗಾಗಿದ್ದರು. ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕೂ ಈ ಸಂಘಟನೆಯ ಕಾರ್ಯಕರ್ತರು, ಮುಖಂಡರು ಭಾರೀ ಪ್ರತಿರೋಧ ವ್ಯಕ್ತಪಡಿಸಿದ್ದರು.
ಈ ಸಂಘಟನೆಯ ಮುಖಂಡರು ಸಂಗ್ರಹಿಸಿದ ಹಣವನ್ನು ಹಿಜಾಬ್-ಉಲ್-ಮುಜಾಹಿದೀನ್, ಲಷ್ಕರ್-ಇ-ತೋಯ್ಬದಂತಹ ಉಗ್ರ ಸಂಘಟನೆಗಳಿಗೆ ನೀಡುತ್ತಿದ್ದವು ಮತ್ತು ಅಲ್ಲಿಂದ ಪ್ರತ್ಯೇಕವಾದ ಹಾಗೂ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದ್ದವು ಎಂಬ ಆರೋಪಗಳು ಕೇಳಿಬಂದಿವೆ.