ದಿಡೀರ್ ದೆಹಲಿಗೆ ತೆರಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

Social Share

ಬೆಂಗಳೂರು,ಫೆ.10-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಳೆದ ರಾತ್ರಿ ದಿಢೀರನೇ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದಷ್ಟೇ ಸಿಎಂ ಬೊಮ್ಮಾಯಿ ಅವರ ಜೊತೆ ದೆಹಲಿಗೆ ತೆರಳಿದ್ದ ಅವರು ಇದೀಗ ಏಕಾಏಕಿ ದೆಹಲಿಗೆ ತೆರಳಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಶೆಟ್ಟರ್ ಅವರು ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡಿದ್ದರೋ ಅಥವಾ ನಾಯಕರನ್ನು ಭೇಟಿ ಮಾಡಲು ತೆರಳಿದ್ದಾರೆ ಎಂಬುದು ದೃಢಪಟ್ಟಿಲ್ಲ. ಸಾಮಾನ್ಯವಾಗಿ ಶೆಟ್ಟರ್ ದೆಹಲಿಗೆ ಕಾರಣವಿಲ್ಲದೆ ಸುಖಾಸುಮ್ಮನೆ ತೆರಳುವುದಿಲ್ಲ. ಅವರಿಗೆ ವರಿಷ್ಠರಿಂದ ಗೌಪ್ಯ ಮಾಹಿತಿ ಬಂದಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ ಶೆಟ್ಟರ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಾತ್ರೋರಾತ್ರಿಯೇ ದೆಹಲಿಗೆ ಪ್ರಯಾಣಿಸಿರುವುದು ಕುತೂಹಲಕ್ಕೆ ಕಾರಣ.
ಸಚಿವ ಸಂಪುಟ ಪುನರ್‍ರಚನೆ ಮಾಡಿ ಶೆಟ್ಟರ್‍ಗೆ ಅವಕಾಶ ನೀಡಿದರೆ ಅದನ್ನು ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುವುದನ್ನು ಅರಿಯಲು ಹಾಗೂ ಯಾರಿಗೆ ಸಚಿವ ಸ್ಥಾನ ಕೊಡಬೇಕು, ಯಾರನ್ನು ಕೈ ಬಿಡಬೇಕು ಎಂಬುದರ ಬಗ್ಗೆ ಸಲಹೆ ಕೇಳಲು ಅವರನ್ನು ಕರೆದಿರಬಹುದು ಎನ್ನಲಾಗುತ್ತಿದೆ.
ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಬೇಡ ಎಂದಿದ್ದ ಶೆಟ್ಟರ್ ಈಗ ಏಕಾಏಕಿ ದೆಹಲಿ ತೆರಳಿರುವುದು ಚರ್ಚೆಗೆ ಗ್ರಾಸವಾಗಿದೆ.

Articles You Might Like

Share This Article