ಮ್ಯೂನಿಚ್,ಫೆ.20- ಕ್ವಾಡ್ ಒಂದು ಏಷ್ಯನ್ ನ್ಯಾಟೋ (ಎನ್‍ಎಟಿಒ) ಇದ್ದಂತೆ ಎಂಬ ಅಭಿಪ್ರಾಯವನ್ನು ತಿರಸ್ಕರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೆಲವು ಆಸಕ್ತ ಶಕ್ತಿಗಳು ಈ ರೀತಿಯ ಹೋಲಿಕೆಗಳನ್ನು ಮಾಡುತ್ತವೆ. ಅದಕ್ಕೆ ಯಾರೂ ಮನ ಸೋಲ ಬಾರದು ಎಂದು ಹೇಳಿದ್ದಾರೆ.
ನಾಲ್ಕು ರಾಷ್ಟ್ರಗಳ ಗುಂಪಾಗಿರುವ ಕ್ವಾಡ್ 21ನೆಯ ಶತಮಾನದ ಒಂದು ಬಗೆಯ ಪ್ರತಿಕ್ರಿಯಾತ್ಮಕ ಮಾರ್ಗವಾಗಿದೆ. ಇದು ಅಧಿಕ ವಿಭಿನ್ನ ಮತ್ತು ಚದುರಿದ ಜಗತ್ತಿಗಾಗಿ ಇದೆ ಎಂದು ಜೈ ಶಂಕರ್ ಪ್ರತಿಪಾದಿಸಿದ್ದಾರೆ.
ಜೈಶಂಕರ್ ಅವರು ನಿನ್ನೆ ಸಂಜೆ ಮ್ಯೂನಿಚ್ ಭದ್ರತಾ ಸಮಾವೇಶ (ಎಂಎಸ್‍ಸಿ)-2022ರಲ್ಲಿ ಎ ಸೀ ಚೇಂಜ್? ರೀಜನಲ್ ಆರ್ಡರ್ ಆ್ಯಂಡ್ ಸೆಕ್ಯೂರಿಟಿ ಇನ್ ದಿ ಇಂಡೋ-ಪೆಸಿಫಿಕ್ ವಿಷಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದರು.
ಕ್ವಾಡ್ ಸಮಾನ ಆಸಕ್ತಿಗಳು, ಸಮಾನ ಮೌಲ್ಯಗಳು ಮತ್ತು ಅಪಾರ ಅನುಕೂಲ ಹೊಂದಿರುವ ಇಂಡೋ-ಪೆಸಿಫಿಕ್ ವಲಯದ ನಾಲ್ಕೂ ಮೂಲೆಗಳಲ್ಲಿ ನೆಲೆಗೊಂಡಿರುವ ನಾಲ್ಕು ರಾಷ್ಟ್ರಗಳ ಗುಂಪಾಗಿದೆ. ಈ ಪ್ರಪಂಚದಲ್ಲಿ ಯಾವುದೇ ದೇಶ, ಅಮೆರಿಕ ಕೂಡ ಸ್ವಂತವಾಗಿ ಜಾಗತಿಕ ಸವಾಲುಗಳನ್ನು ಎದುರಿಸುವುದು ಅಸಾಧ್ಯ ಎಂಬ ಅರಿವು ಹೊಂದಿರುವ ಗುಂಪು ಇದಾಗಿದೆ ಎಂದು ಜೈಶಂಕರ್ ನುಡಿದರು.
ಕ್ವಾಡ್‍ನ ಉಗಮ 2017ರಲ್ಲಿ ಪ್ರಾರಂಭವಾಗಿದೆ. 2020ರ ಬೆಳವಣಿಗೆಯ ನಂತರವಲ್ಲ ಎಂದು ಅವರು ಪೂರ್ವ ಲಡಾಖ್‍ನಲ್ಲಿ ಚೀನಾದೊಂದಿಗೆ ನಿಯಂತ್ರಣ ರೇಖೆಯುದ್ದಕ್ಕೂ ಉಂಟಾಗಿರುವ ಉದ್ವಿಗ್ನತೆಯ ಕುರಿತಂತೆ ಪ್ರತಿಪಾದಿಸಿದರು.
