ನವದೆಹಲಿ, ಫೆ.25- ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಗುರುವಾರ ರಾತ್ರಿ ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಸಂಭಾಷಣೆ ನಡೆಸಿದ್ದು, ಉಕ್ರೇನ್ ಬಿಕ್ಕಟ್ಟನ್ನು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯು ಉತ್ತಮ ಮಾರ್ಗ ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿಗೆ ವ್ಯಾಪಕ ಖಂಡನೆ ಮತ್ತು ಸಂಘರ್ಷದ ಭಯ ಉಂಟಾದ ಹಿನ್ನೆಲೆಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಜಾಗತಿಕ ಪ್ರಯತ್ನಗಳು ಅಗತ್ಯವಾಗಿವೆ ಎಂದಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಅವರೊಂದಿಗಿನ ಮಾತುಕತೆಯಲ್ಲಿ, ಸಂವಾದ ಮತ್ತು ರಾಜತಾಂತ್ರಿಕತೆ ಬಿಕ್ಕಟ್ಟು ಶಮನಗೊಳಿಸಲು ಉತ್ತಮ ಮಾರ್ಗವಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
ಉಕ್ರೇನ್ ಬೆಳವಣಿಗೆಗಳ ಬಗ್ಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಉಕ್ರೇನ್ ನಿಂದ ಸುಮಾರು 16 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತವು ಒತ್ತು ನೀಡಲಿದೆ. ಉಕ್ರೇನ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಜೊತೆಯಲ್ಲು ಚರ್ಚೆ ನಡೆಸಿದ್ದೇವೆ ಎಂದು ಜೈಶಂಕರ್ ಹೇಳಿದ್ದಾರೆ.
ಈ ಬಗ್ಗೆ ಅಮೆರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ಟ್ವಿಟ್ ನಡೆಸಿದ್ದು, ಉಕ್ರೇನ್ ಮೇಲೆ ರಷ್ಯಾದ ಪೂರ್ವಯೋಜಿತ, ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಯ ಕುರಿತು ಚರ್ಚಿಸಲು ಬ್ಲಿಂಕನ್ ರೊಂದಿಗೆ ಜೈಶಂಕರ್ ಸಮಾಲೋಚನೆ ನಡೆಸಿದ್ದಾರೆ. ಆಕ್ರಮಣವನ್ನು ಖಂಡಿಸಲು ಮತ್ತು ಸೇನೆಯ ತಕ್ಷಣ ವಾಪಸಾತಿ ಹಾಗೂ ಕದನ ವಿರಾಮ ಸಾಮೂಹಿಕ ಪ್ರತಿಕ್ರಿಯೆ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಎಂದು ಅದು ಹೇಳಿದೆ.
