ಸಖತ್ ಸದ್ದು ಮಾಡ್ತಿದೆ ಜೇಮ್ಸ್ ಚಿತ್ರದ ‘ಟ್ರೇಡ್‍ಮಾರ್ಕ್’ ಸಾಂಗ್

Social Share

ಬೆಂಗಳೂರು, ಮಾ.1- ಕಳೆದೆರಡು ದಿನಗಳಿಂದ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಗೀತೆಯ ಬಿಡುಗಡೆಗೆ ಕಾದಿದ್ದ ಅಪ್ಪುವಿನ ಅಭಿಮಾನಿಗಳಿಗೆ ಚಿತ್ರತಂಡವು ಗೀತೆಯೊಂದನ್ನು ಯುಟ್ಯೂಬ್‍ನಲ್ಲಿ ಬಿಡುಗಡೆ ಮಾಡುವ ಮೂಲಕ ಶಿವರಾತ್ರಿ ಹಬ್ಬದ ಉಡುಗೊರೆ ನೀಡಿದ್ದಾರೆ.
ಅಪ್ಪು ನಟನೆಯ ಕೊನೆಯ ಚಿತ್ರವಾದ ಜೇಮ್ಸ್ ಚಿತ್ರವು ಈಗಾಗಲೇ ಪೋಸ್ಟರ್‍ಗಳು, ಟೀಸರ್‍ಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಇಂದು ಬಿಡುಗಡೆಯಾಗಿರುವ ಟ್ರೇಡ್ ಮಾರ್ಕ್ ಗೀತೆಯು ಅಭಿಮಾನಿ ಗಳ ಮನಸ್ಸನ್ನು ಗೆದ್ದಿದೆ.ಇತ್ತೀಚೆಗೆ ಬಿಡುಗಡೆಗೊಂಡಿದ್ದ ಜೇಮ್ಸ್ ಚಿತ್ರದ ಟೀಸರ್‍ನಲ್ಲಿ ಪುನೀತ್‍ರಾಜ್‍ಕುಮಾರ್‍ರ ಖಡಕ್ ಲುಕ್, ಸ್ಟಂಟ್ಸ್ , ಡೈಲಾಗ್‍ಗಳು ಪುನೀತ್‍ರ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಸ್ಟಾರ್‍ಗಳ ಚಿತ್ರದಲ್ಲಿ ಇತ್ತೀಚೆಗೆ ಟ್ರೇಡ್ ಮಾರ್ಕ್ ಗೀತೆಯನ್ನು ಚಿತ್ರೀಕರಿಸಿಕೊಂಡು ಬರುತ್ತಿರುವ ಟ್ರೆಂಡ್ ಸೃಷ್ಟಿಯಾಗಿದ್ದು, ಪುನೀತ್‍ರಾಜ್‍ಕುಮಾರ್‍ರ ಜೇಮ್ಸ್ ಚಿತ್ರದಲ್ಲೂ ಅಂತಹ ಒಂದು ಗೀತೆಯನ್ನು ಸೃಷ್ಟಿಸಿದ್ದು ಇಂದು ಪಿಆರ್‍ಕೆ ಯುಟ್ಯೂಬ್ ಮೂಲಕ ಬಿಡುಗಡೆ ಮಾಡಲಾಗಿದ್ದು ಕ್ಷಣಾರ್ಧದಲ್ಲಿ ಈ ಗೀತೆಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಸಾಮಾನ್ಯವಾಗಿ ಇಂತಹ ಟ್ರೇಕ್‍ಮಾರ್ಕ್ ಗೀತೆಗಳನ್ನು ಚಿತ್ರದ ಸ್ಟಿಲ್ಸ್‍ಗಳನ್ನು ಬಳಸಿ ಚಿತ್ರೀಕರಿಸಿಕೊಳ್ಳಲಾಗುತ್ತದೆ, ಆದರೆ ಜೇಮ್ಸ್ ಚಿತ್ರದ ಹಾಡಿನಲ್ಲಿ ಪುನೀತ್‍ರಾಜ್‍ಕುಮಾರ್ ನಟನೆಯ ದೃಶ್ಯಗಳನ್ನು ಬಳಸಿಕೊಂಡಿರುವುದು ಕೂಡ ಅಭಿಮಾನಿಗಳ ಮನರಂಜಿಸಿದೆ.
ಇದು ಕೇವಲ ಹಾಡಲ್ಲ, ಎಲ್ಲಾ ಅಭಿಮಾನಿಗಳ ದನಿಯಿದು ಎಂಬ ಸಾಲುಗಳೊಂದಿಗೆ ಆರಂಭಗೊಳ್ಳುವ ಗೀತೆಗೆ ಚೇತನ್‍ಕುಮಾರ್ ಅವರು ಬರೆದಿರುವ ಹಾಡಿಗೆ ಚರಣ್‍ರಾಜ್ ಅವರು ಪವರ್‍ಫುಲ್ಲಾಗಿರುವ ಸಂಗೀತವನ್ನು ನೀಡಿದ್ದಾರೆ.
ಈ ಹಾಡಿನ ಮತ್ತೊಂದು ವಿಶೇಷವೆಂದರೆ ಸ್ಯಾಂಡಲ್‍ವುಡ್‍ನ ಗಾಯಕರಾದ ಎಂ.ಸಿ.ವಿಕ್ಕಿ, ಅದಿತಿ ಸಾಗರ್, ಚಂದನ್‍ಶೆಟ್ಟಿ, ಶರ್ಮಿಳಾ, ಚರಣ್‍ರಾಜ್‍ಅವರು ದನಿಯಾಗಿದ್ದರೆ, ನಟ ರಾಘವೇಂದ್ರರಾಜ್‍ಕುಮಾರ್‍ರ ಪುತ್ರ ಯುವರಾಜ್‍ಕುಮಾರ್ ಕೂಡ ಗೀತೆಗೆ ಧ್ವನಿ ನೀಡಿದ್ದಾರೆ.
ಸ್ಯಾಂಡಲ್‍ವುಡ್‍ನ ಮುಂ ಚೂಣಿ ನಾಯಕಿಯರಾಗಿರುವ ರಚಿತಾರಾಮ್, ಆಶಿಕಾ ರಂಗನಾಥ್, ಶ್ರೀಲೀಲಾ ಅವರು ಕೂಡ ಟ್ರೇಡ್‍ಮಾರ್ಕ್ ಗೀತೆಯಲ್ಲಿ ಕಾಣಿಸಿಕೊಂಡಿದ್ದು , ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಗೀತೆಯು ಇಂದು ಬಿಡುಗಡೆ ಆಗಿದೆ. ಕಿಶೋರ್ ಪತ್ತಿಕೊಂಡ ನಿರ್ಮಿಸಿರುವ ಜೇಮ್ಸ್ ಚಿತ್ರವು ಅಪ್ಪುವಿನ ಹುಟ್ಟುಹಬ್ಬವಾದ ಮಾರ್ಚ್ 17 ರಂದು ತೆರೆಗೆ ಬರಲಿದೆ.

Articles You Might Like

Share This Article