ಸಕ್ರಿಯ ರಾಜಕಾರಣಕ್ಕೆ ಮಾಜಿ ಸಚಿವ ಜನಾರ್ಧನರೆಡ್ಡಿ..?

Social Share

ಬೆಂಗಳೂರು,ಫೆ.3-ಉಪಮುಖ್ಯಮಂತ್ರಿ ಸ್ಥಾನ ಗಿಟ್ಟಿಸಲು ದೆಹಲಿಗೆ ಹಾರಿರುವ ಸಾರಿಗೆ ಸಚಿವ ಶ್ರೀರಾಮುಲು, ತಮ್ಮ ಪರಮಾಪ್ತ ಹಾಗೂ ಮಾಜಿ ಸಚಿವ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಸೇರ್ಪಡಿಸಲು ತೆರೆಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ. ಪ್ರಸ್ತುತ ದೆಹಲಿಯಲ್ಲಿರುವ ರಾಮುಲು, ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೆಲಸದ ನಿಮಿತ್ತ ನಾನು ಬಂದಿದ್ದೇನೆ ಎಂದು ರಾಮುಲು ಹೇಳಿದರಾದರೂ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಕರೆತರಲು ಅವರು ವರಿಷ್ಠರ ಬೇಟಿಗೆ ಬಂದಿದ್ದಾರೆ ಎಂಬ ವದಂತಿ ಬಿಜೆಪಿಯಲ್ಲಿ ಹಬ್ಬಿದೆ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನರೆಡ್ಡಿಯನ್ನು ಸದ್ಯ ಬಿಜೆಪಿಯವರು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ. 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಅವರು ಉತ್ಸುಕತೆ ತೋರಿದ್ದರೂ ಕೇಂದ್ರ ವರಿಷ್ಠರು ದೂರ ಇಟ್ಟಿದ್ದರು.
ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೊಂಚ ಹೊರಗಿರುವ ಬಿಜೆಪಿಗೆ ಜನಾರ್ದನರೆಡ್ಡಿ ಸೇರ್ಪಡೆಯಾದರೆ ಹೊಸ ಚೈತನ್ಯ ಬರುತ್ತದೆ ಎಂಬುದು ರಾಮುಲು ಲೆಕ್ಕಾಚಾರವಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಸೇರಿದಂತೆ ಮತ್ತಿತರ ಕಡೆ ಜನಾರ್ದನರೆಡ್ಡಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಇದು ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಅವರ ಬೆಂಬಲಿಗರ ವಾದವಾಗಿದೆ.
ಇದೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ರಾಮುಲು ತಮಗೆ ಡಿಸಿಎಂ ಸ್ಥಾನ ಹಾಗೂ ಗೆಳೆಯನನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‍ನಿಂದ ತವರು ಜಿಲ್ಲೆಗೆ ಮರಳಲು ಷರತ್ತುಬದ್ದ ಜಾಮೀನು ಪಡೆದಿದ್ದ ರೆಡ್ಡಿ, ತೆರೆಮರೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳಲು ಹವಣಿಸುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಇಲ್ಲವೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಿಂದ ಸ್ರ್ಪಸಲು ಈಗಾಗಲೇ ರೆಡ್ಡಿ ಈ ಎರಡು ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಬಳ್ಳಾರಿಗೆ ತೆರಳಿದ್ದ ಅವರು, ಹುಟ್ಟುಹಬ್ಬದ ನಿಮಿತ್ತ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದರು.
2018ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಸಜ್ಜಾಗಿದ್ದ ರೆಡ್ಡಿಗೆ, ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜನಾರ್ಧನರೆಡ್ಡಿಗೂ ಬಿಜೆಪಿಗೂ ಸಂಬಂಧವೇ ಇಲ್ಲ. ಅವರು ನಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸುವ ಅಗತ್ಯವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈಗ ಪುನಃ ರೆಡ್ಡಿಯನ್ನು ಬಿಜೆಪಿಗೆ ಕರೆತರಲು ಆಪ್ತ ರಾಮುಲು ಹವಣಿಸುತ್ತಿದ್ದಾರೆ.
ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ಏನೋ ನೀಡಿದೆ. ಆದರೆ, ಅವರ ಮೇಲಿನ ಕೇಸುಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ. ಈ ಹಂತದಲ್ಲಿ ಅವರನ್ನು ಬಿಜೆಪಿಯಲ್ಲಿ ಸಕ್ರಿಯರಾಗಿರಲು ಅವಕಾಶ ನೀಡಿದರೆ, ಕಾಂಗ್ರೆಸ್ ವಿರುದ್ದ ಹೋರಾಡುವುದು ಕಷ್ಟವಾಗಬಹುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಕರಣಗಳೂ ವಿಚಾರಣೆಯ ಹಂತದಲ್ಲಿ ಇರುವುದರಿಂದ ಡಿಕೆಶಿ ವಿರುದ್ದ ಮುಗಿಬೀಳಲು ಬಿಜೆಪಿಗೆ ಕಷ್ಟವಾಗಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಹೊಂದಿದೆ.
ಈ ಹಿಂದೆ ದೊಡ್ಡ ಪ್ರಮಾಣದ ವೋಟ್ ಬ್ಯಾಂಕ್ ಹೊಂದಿದ್ದ ಜನಾರ್ಧನ ರೆಡ್ಡಿಗೆ ಸದ್ಯ ಹಿಂದಿನ ವರ್ಚಸ್ಸು ಇಲ್ಲ. ಚುನಾವಣಾ ಪ್ರಚಾರದ ಸಮಯದಲ್ಲಿ ಸ್ವಚ್ಛ ಆಡಳಿತ ನೀಡಿ ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರುತ್ತೇವೆ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಬಿಜೆಪಿಗೆ ರೆಡ್ಡಿಗೆ ಮಣೆ ಹಾಕಿದರೆ ಎದುರಾಗಬಹುದು.
ಜೊತೆಗೆ, ಸದ್ಯ  ಜಾಮೀನು ಮೇಲೆ ರೆಡ್ಡಿ ಹೊರಗಿರುವ ಕಾರಣ ಇತರ ನಾಯಕರು ಬೆಂಬಲಿಸುವುದು ಅನುಮಾನ, ಇದು ರಾಜ್ಯ ರಾಜಕೀಯದಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು.

Articles You Might Like

Share This Article