ಬೆಂಗಳೂರು,ಮಾ.8- ಜೆಡಿಎಸ್‍ನ ಬಹು ನಿರೀಕ್ಷಿತ ಜನತಾ ಜಲಧಾರೆ ಏಪ್ರಿಲ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಅದಕ್ಕಾಗಿ ಈಗಾಗಲೇ 15 ಗಂಗಾ ರಥಗಳನ್ನು ಸಿದ್ಧಪಡಿಸಲಾಗಿದೆ. ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಜನತಾ ಜಲಧಾರೆ ಕಾರ್ಯಕ್ರಮವನ್ನು ಪ್ರಾರಂಭಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ.
ಈ ಯಾತ್ರೆಯಲ್ಲಿ ಶಾಸಕರು ಪಾಲ್ಗೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಮುಂಬರುವ ವಿಧಾನಸಭೆಯಲ್ಲಿ ಸ್ರ್ಪಧಿಸುವ ಅಭ್ಯರ್ಥಿಗಳು ಹಾಗೂ ಜಿಲ್ಲಾಧ್ಯಕ್ಷರಿಗೆ ಜಲಧಾರೆ ಯಾತ್ರೆಯ ಹೊಣೆ ವಹಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಗಂಗಾ ಪೂಜೆ, ಮೆರವಣಿಗೆ ಮತ್ತಿತರ ಸಂದರ್ಭಗಳಲ್ಲಿ ಯಾವುದೇ ರೀತಿಯ ಲೋಪವಾಗದಂತೆ, ಟ್ರಾಫಿಕ್ ಜಾಮ್ ಮತ್ತಿತರ ವಿಚಾರಗಳಲ್ಲಿ ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು, ಸರ್ಕಾರದ ಕಾನೂನು ಮತ್ತು ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಸೂಚನೆ ನೀಡಿದ್ದಾರೆ.
ಹದಿನೈದು ರಥಗಳು ಕಾವೇರಿ, ಕಪಿಪಾ, ಕೃಷ್ಣಾ, ತುಂಗಭದ್ರಾ ಸೇರಿದಂತೆ ವಿವಿಧ ನದಿಗಳ ಪವಿತ್ರ ಜಲವನ್ನು ಹೊತ್ತು ತರಲಿವೆ. ರಾಜ್ಯದಲ್ಲಿ
ನೀರಾವರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಈ ಯಾತ್ರೆಯನ್ನು ಜೆಡಿಎಸ್ ಆರಂಭಿಸಿದೆ.
ಈಗಾಗಲೇ ಬೀದರ್ ಭಾಗದ ಪಕ್ಷದ ಮುಖಂಡರ ಸಭೆ ತರಿಸಿ ಗಂಗಾ ರಥ ಯಾತ್ರೆಯ ರೂಪುರೇಷೆ ಮತ್ತು ರೂಟ್ ಮ್ಯಾಪ್ ಬಗ್ಗೆಯೂ ನಿರ್ದೇಶನ ನೀಡಿದ್ದಾರೆ. ಅದೇ ರೀತಿ ನಿನ್ನೆ ಕಣಕಂಬಿ, ಮಹದಾಯಿ, ಕೃಷ್ಣ, ಮಲಪ್ರಭ, ಘಟಪ್ರಭಾ ಜಲಾನಯನ ಪ್ರದೇಶದ ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿ ಜನತಾ ಜಲಧಾರೆಯನ್ನು ಯಶಸ್ವಿಗೊಳಿಸಲು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಅಧಿವೇಶನ ಮುಗಿದ ಬಳಿಕ ಜನತಾ ಜಲಧಾರೆ ಆರಂಭಿಸಲು ಉದ್ದೇಶಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ
ಎಚ್.ಡಿ.ದೇವೇಗೌಡರೊಂದಿಗೆ ಸಭೆ ನಡೆಸಿ ಏಪ್ರಿಲ್‍ನಲ್ಲಿ ದಿನಾಂಕವನ್ನು ನಿಗದಿಪಡಿಸಲಾಗು ತ್ತದೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
