ದೇಶಾದ್ಯಂತ 7,733 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು ಕ್ರಿಯಾತ್ಮಕ

Spread the love

ಬೆಂಗಳೂರು, ಮೇ 15 – ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು, ಬ್ಯೂರೋ ಆಫ್ ಫಾರ್ಮ ಪಿಎಸ್ ಯು ಆಫ್ ಇಂಡಿಯಾ(ಬಿಪಿಪಿಐ), ವಿತರಕರು ಮತ್ತು ಇತರೆ ಪಾಲುದಾರರು ಒಟ್ಟುಗೂಡಿ ಕೋವಿಡ್-19 ಸಾಂಕ್ರಾಮಿಕ ಸೋಂಕು ತೊಡೆದುಹಾಕುವ ಹೋರಾಟಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಮೇ 13 ರ ವರೆಗೆ ದೇಶಾದ್ಯಂತ 7,733 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಮಳಿಗೆಗಳು ತಲೆ ಎತ್ತಿವೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯಡಿ, ಈ ಔಷಧಿ ಕೇಂದ್ರಗಳಲ್ಲಿ 1,449 ವಿಧದ ಔಷಧಿಗಳು ಮತ್ತು 204 ವಿಧದ ಶಸ್ತ್ರಚಿಕಿತ್ಸೆ ಮತ್ತು ಗ್ರಾಹಕ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೇ 13.(ಬಿಪಿಪಿಐ) 80.18 ಕೋಟಿ ರೂ. ಮೊತ್ತದ ಮಾರಾಟ ನಡೆಸಿದ್ದು, ಇದರಿಂದ ದೇಶದ ನಾಗರಿಕರಿಗೆ (ಖರೀದಿದಾರರಿಗೆ) ಸುಮಾರು 500 ಕೋಟಿ ರೂ. ಉಳಿತಾಯ ಆಗಿದೆ.  ಸರಕು ಸಾಗಣೆ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದ್ದು, ಪ್ರಸ್ತುತ, ಔಷಧಿಗಳ ದಾಸ್ತಾನು ಮತ್ತು ವಿತರಣೆಗಾಗಿ ಗುರುಗ್ರಾಮ, ಗುವಾಹತಿ ಮತ್ತು ಚೆನ್ನೈನಲ್ಲಿ ಮೂರು ಆಧುನಿಕ ಉಗ್ರಾಣಗಳು ಕಾರ್ಯ ನಿರ್ವಹಿಸುತ್ತಿವೆ.

ಸೂರತ್  ನಲ್ಲಿ   ನಾಲ್ಕನೇ ಉಗ್ರಾಣದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ದೇಶಾದ್ಯಂತ 37 ವಿತರಕರನ್ನು ನೇಮಿಸಲಾಗಿದ್ದು, ಅವರು ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಔಷಧಿ ಪೂರೈಸಲು ಸಂಪೂರ್ಣ ಬೆಂಬಲ ನೀಡಲಿದ್ದಾರೆ. 2020-21ರಲ್ಲಿ ಕೋವಿಡ್-19 ಬಿಕ್ಕಟ್ಟು ಶುರುವಾದಾಗ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮೂಲಕ ದೇಶಕ್ಕೆ ಅಗತ್ಯ ಸೇವೆ ಒದಗಿಸಲಾಯಿತು.

ಲಾಕ್ಡೌನ್ ಅವಧಿಯಲ್ಲೂ ಜನೌಷಧಿ ಮಳಿಗೆಗಳು ಕಾರ್ಯ ನಿರ್ವಹಿಸಿದವು. ಸೇವಾ ಬದ್ಧತೆಯ ಭಾಗವಾಗಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಲು ಮಳಿಗೆಗಳು ನಿರಂತರ ಕಾರ್ಯಾಚರಣೆ ನಡೆಸಿದವು.

ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಪ್ರಮುಖ ಮೂರು ಔಷಧಿಗಳಿಗೆ ನಿಗದಿಪಡಿಸಿರುವ ಬೆಲೆಯ ಅರ್ಧದಷ್ಟು ಮೊತ್ತಕ್ಕೆ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳನ್ನು ಮಾರಾಟ ಮಾಡುವ ತತ್ವವನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ, ಜನೌಷಧಿ ಕೇಂದ್ರಗಳಲ್ಲಿ ಸಿಗುವ ಔಷಧಿಗಳ ಬೆಲೆ ಮುಕ್ತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಕನಿಷ್ಠ ಶೇ.50 ರಷ್ಟು ಕಡಿಮೆ ಇರುತ್ತದೆ. ಬ್ರಾಂಡೆಡ್ ಔಷಧಿಗಳ ಬೆಲೆಗೆ ಹೋಲಿಸಿದರೆ ಕೆಲವು ಔಷಧಿಗಳ ಬೆಲೆಯಲ್ಲಿ ಶೇ. 80ರಿಂದ 90ರಷ್ಟು ಕಡಿಮೆ ಇರುತ್ತದೆ.

ಆರ್ಥಿಕ ವರ್ಷದಲ್ಲಿ ಬಿಪಿಪಿಐಸಂಸ್ಥೆಯು ಲಾಕ್ಡೌನ್ ಸಂಕಷ್ಟ ಸಮಯದಲ್ಲೂ ಗಮನಾರ್ಹವಾಗಿ 665.83 ಕೋಟಿ ರೂ. ಮಾರಾಟ ವಹಿವಾಟು ನಡೆಸಿತ್ತು. ಇದರಿಂದ ದೇಶದ ಸಾಮಾನ್ಯ ಜನರಿಗೆ 4,000 ಕೋಟಿ ರೂ. ಉಳಿತಾಯವಾಗಿತ್ತು.
ಬಿಪಿಪಿಐ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಇರುವ ಔಷಧಿಗಳ ದಾಸ್ತಾನು ಮಾಡಿದೆ. ಮುಖಗವಸು, ಹೈಡ್ರೊಕ್ಲೋರೊಕ್ವಿನ್, ಪ್ಯಾರಾಸಿಟಮಾಲ್ ಮತ್ತು ಅಝಿತ್ರೊಮೈಸಿನ್ ಮಾತ್ರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿದೆ.

ಬಿಪಿಪಿಐ ಸುಮಾರು 25 ಲಕ್ಷ ಮುಖಗವಸುಗಳು, 1.25 ಲಕ್ಷ ಸ್ಯಾನಿಟೈಸರ್ ಬಾಟಲ್|ಗಳು, 137 ಲಕ್ಷ ಹೈಡ್ರೊಕ್ಲೋರೊಕ್ವಿನ್ ಮಾತ್ರೆಗಳು ಮತ್ತು 323 ಲಕ್ಷ ಪ್ಯಾರಾಸಿಟಮಾಲ್ ಮಾತ್ರೆಗಳನ್ನು 2020-21 ಆರ್ಥಿಕ ವರ್ಷದಲ್ಲಿ 750 ಜನೌಷಧಿ ಕೇಂದ್ರಗಳಲ್ಲಿ ಕೈಗೆಟಕುವ ದರಕ್ಕೆ ಜನರಿಗೆ ಮಾರಾಟ ಮಾಡಿದೆ. ಅಲ್ಲದೆ ಅದು, 30 ಕೋಟಿ ರೂ. ಮೌಲ್ಯದ ಔಷಧಿಗಳನ್ನು ನೆರೆಹೊರೆಯ ಸ್ನೇಹಮಯಿ ರಾಷ್ಟ್ರಗಳಿಗೆ ವಿತರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪೂರೈಕೆ ಮಾಡಿದೆ. ಕೋವಿಡ್-19 ಚಿಕಿತ್ಸೆಗೆ ಅಗತ್ಯವಾದ ಹಲವು ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿವೆ.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯು ಹಲವಾರು ಪೌಷ್ಟಿಕಾಂಶ ಹೆಚ್ಚಿಸುವ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಔಷಧಿಗಳು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಶೇ. 50-90 ರಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿವೆ ಎಂದು ಹೇಳಿದೆ.