ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗೆ ಮೈಸೂರಲ್ಲಿ ಕಸರತ್ತು

Social Share

ಬೆಂಗಳೂರು. ಅ.18- ಮುಂಬರುವ ವಿಧಾನಸಭೆ ಚುನವಾಣೆಯಲ್ಲಿ ಕಣಕ್ಕಿಳಿಸಲಿರುವ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮೈಸೂರಿನಲ್ಲಿ ನಡೆಯಲಿರುವ ಕಾರ್ಯಗಾರದಲ್ಲಿ ಅಂತಿಮಗೊಳಿಸಲು ಉದ್ದೇಶಿಸಲಾಗಿದೆ.

ಕಳೆದ ಒಂದು ವರ್ಷದಿಂದಲೂ ಅಭ್ಯರ್ಥಿಗಳ ಸಾಮಥ್ರ್ಯವನ್ನು ಪದೇ ಪದೇ ಪರೀಕ್ಷಿಸುತ್ತಾ ಬಂದಿರುವ ಜೆಡಿಎಸ್ ವರಿಷ್ಠರು, ಮೈಸೂರಿನ ಖಾಸಗಿ ರೆಸಾರ್ಟ್‍ನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ಕಾರ್ಯಗಾರ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗುತ್ತದೆ.

ವಿಧಾನಸಭೆ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಹಾಗೂ ಶಾಸಕರಿಗೆ ಎರಡು ದಿನಗಳ ಕಾರ್ಯಗಾರದಲ್ಲಿ ಚುನಾವಣೆ ಕಾರ್ಯತಂತ್ರ ಮತ್ತು ಸಿದ್ಧತೆ ಬಗ್ಗೆ ಪಕ್ಷದ ವರಿಷ್ಠರು ಮಾರ್ಗದರ್ಶನ ಮಾಡಲಿದ್ದಾರೆ. ಕಳೆದ ವರ್ಷ ನಡೆಸಿದ ಕಾರ್ಯಗಾರದ ಸಂದರ್ಭದಲ್ಲಿ ಸಂಭವನೀಯ ಅಭ್ಯರ್ಥಿಗಳಿಗೆ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್‍ನ ಮೌಲ್ಯಮಾಪನವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಗಾರದಲ್ಲಿ ಮಾಡಲಿದ್ದಾರೆ.

ಮೌಲ್ಯಮಾಪನದಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಟಿಕೆಟ್ ನೀಡಲಿದ್ದು, ಅನುತೀರ್ಣರಾದವರಿಗೆ ಟಿಕೆಟ್ ನಿರಾಕರಿಸಿ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಹೊಂದಿರುವ ಜೆಡಿಎಸ್ ವರಿಷ್ಠರು, 123 ಕ್ಷೇತ್ರಗಳಲ್ಲಿ ಗೆಲುವಿನ ಗುರಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ನಡೆಯುವ ಕಾರ್ಯಗಾರದಲ್ಲಿ 126 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಸಮಾಲೋಚನೆ ನಡೆಸಲಾಗುತ್ತದೆ.

ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳಿದ್ದರೂ ಈಗಿನಿಂದಲೇ ಚುನಾವಣಾ ಸಿದ್ಧತೆ ಆರಂಭಿಸಲು ಹಾಗೂ ಬಹು ಉದ್ದೇಶದ ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಸಂಭವನೀಯ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Articles You Might Like

Share This Article