ಕೊರಟಗೆರೆ,ಡಿ.4- ಬಯಲುಸೀಮೆ ಜಿಲ್ಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1000 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.
ತೋವಿನಕೆರೆ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆಂಗಳೂರಿಗೆ ಸಮೀಪ ಇರುವ ಪ್ರದೇಶಗಳೇ ಅಭಿವೃದ್ಧಿಯಾಗಿಲ್ಲ. ಗಡಿ ಪ್ರದೇಶಗಳ ಪರಿಸ್ಥಿತಿ ಇನ್ನೂ ಶೋಚನೀಯ, ಮಧುಗಿರಿ, ಪಾವಗಡ, ಕೊರಟಗೆರೆ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಅಭಿವೃದ್ಧಿಯಲ್ಲಿ ಅಸಮಾನತೆ ಎದ್ದು ಕಾಣುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳ ಸಮಗ್ರ ಕಾಯಕಲ್ಪ ಯೋಜನೆ ರೂಪಿಸುತ್ತೇವೆ ಎಂದರು.
ನಿನ್ನೆ ಇಡೀ ದಿನ ಕೊರಟಗೆರೆ ಕ್ಷೇತ್ರದಲ್ಲಿ ಪ್ರವಾಸ ಮಾಡಿದಾಗ ಕಂಡ ದೃಶ್ಯಗಳು ನನಗೆ ನೋವುಂಟು ಮಾಡಿವೆ. ರಾತ್ರಿ ನನಗೆ ನಿದ್ದೆ ಬರಲಿಲ್ಲ, ಆ ದೃಶ್ಯಗಳು ನನ್ನ ಮನಕಲಕಿವೆ. ಕಾಂಗ್ರೆಸ್, ಬಿಜೆಪಿ ನಾಯಕರು ನಾವು ಎಲ್ಲ ಕಾರ್ಯಕ್ರಮ ಮಾಡಿದ್ದೀವಿ ಎಂದು ಹೇಳಿದ್ದಾರೆ. ಇಲ್ಲಿ ನೋಡಿದರೆ ಏನು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜಾಗತಿಕ ಬೆಂಬಲ
ಪುರವರದಲ್ಲಿ 10ನೇ ತರಗತಿ ಮಕ್ಕಳು ಶಾಲೆಗೆ ಹೋಗಿ ಬರೋಕೆ ಕಷ್ಟ. ಶಾಲಾ ಮಕ್ಕಳಿಗೆ ಪಾಸ್ ಕೊಟ್ಟಿದ್ದಾರೆ. ಆದರೆ ಬಸ್ ನಿಲ್ಲಿಸುವುದಲ್ಲ. ಕಾಟಚಾರಕ್ಕೆ ಬಸ್ ಪಾಸ್ ನೀಡಿದ್ದಾರೆ ಎಂದು ಆರೋಪಿಸಿದರು.
ತುಮಕೂರು ಸೇರಿ ಬರಪೀಡಿತ, ಬಯಲು ಸೀಮೆ ಜಿಲ್ಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 1000 ಕೋಟಿ ರೂ. ಒದಗಿಸಲಾಗುವುದು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೆಲ ಗಂಟೆಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಲೂಟಿ ಮಾಡೋಕೆ ಈ ಹಣ ಬಿಡುಗಡೆ ಮಾಡಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನನ್ನ ಸಂಕಲ್ಪ. ಐದು ವರ್ಷಗಳಲ್ಲಿ ಈ ಗಡಿ ಅಭಿವೃದ್ಧಿ ಮಾಡುತ್ತೇನೆ. ಹಣ ದುರ್ಬಳಕೆ ಆಗಬಾರದು, ಕಟ್ಟೆಚ್ಚರ ವಹಿಸುವೆ. ಯೋಜನಾ ಬದ್ದ ಪ್ರಗತಿ ನನ್ನ ನೇತೃತ್ವದಲ್ಲಿ ನಡೆಯುತ್ತೆ. ಬಡತನ ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದೇನೆ ಎಂದರು.
ನನಗೆ ರೌಡಿಶೀಟರ್ ಗಳ ಬಗ್ಗೆ ಮಹತ್ವ ಇಲ್ಲ. ಈ ಬಡ ಜನರ ಬದುಕು ಕಟ್ಟಿಕೊಡಬೇಕು. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಣವನ್ನ ಮೀಸಲು ಇಡುತ್ತೇನೆ. ಪ್ರತಿ ಕುಟುಂಬಗಳ ಆರ್ಥಿಕ ಸ್ಥಿತಿ ಸದೃಢಗೊಳಿಸಬೇಕು ಎಂದು ಹೇಳಿದರು.
ಕೊಡಿಗೇಹಳ್ಳಿ ಮಗು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಹಾಗೂ ಆ್ಯಂಬುಲೆನ್ಸ್ ಚಾಲಕನ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಹೆಚ್‍ಓ ಅವತ್ತು ಸ್ಪಷ್ಟೀಕರಣ ಕೊಟ್ಟು ವೈದ್ಯರು ಬಂದ ತಕ್ಷಣವೇ ಚಿಕಿತ್ಸೆ ನೀಡಿದ್ದರು. ಆ ದಿನ ಕುಟುಂಬದವರು ಆಸ್ಪತ್ರೆಗೆ ಬಂದಾಗ ಮಗು ಮೃತಪಟ್ಟಿತ್ತು ಎಂದು ಹೇಳಿದ್ದರು.
ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್
ಹಾಗಿದ್ದರೆ ವೈದ್ಯರು, ಚಾಲಕನನ್ನು ಯಾಕೆ ಅಮಾನತು ಮಾಡಿದರು? ಅಮಾನತು ಮಾಡಲು ಸೂಚಿಸಿದವರು ಯಾರು? ಸರ್ಕಾರ ವೈಫಲ್ಯ ಯಾವ ರೀತಿ ಮುಚ್ಚಿಕೊಕೊಳ್ಳುತ್ತಾರೆ, ಇದಕ್ಕೆ ಮೇಜರ್ ಸರ್ಜರಿ ಆಗಬೇಕಿದೆ ಎಂದು ಒತ್ತಾಯಿಸಿದರು.
ಇದು ಜಂಗಲ್ ರಾಜ್ಯವಾಗುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮೇಜರ್ ಸರ್ಜರಿ ಆಗಬೇಕಿದೆ. ಇಲ್ಲವಾದರೆ ರಾಜ್ಯದ ಜನರು ಬದುಕಲು ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಸರ್ಜರಿ ಮಾಡುವುದಕ್ಕೆ ಸಾಧ್ಯವಿಲ್ಲ. ಪ್ರಾದೇಶಿಕ ಅಸ್ಮಿತೆ ಇರುವ ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
JDS, power,1000crore, grant, infrastructure, development, hd kumaraswamy,