ಮೇ 5ರಂದು ಜೆಡಿಎಸ್ ಕೋರ್ ಕಮಿಟಿ ಸಭೆ

ಬೆಂಗಳೂರು,ಮೇ2- ಜನತಾ ಜಲಧಾರೆಯ ಬೃಹತ್ ಸಮಾವೇಶ ನಡೆಸುವ ಹಾಗೂ ಪಕ್ಷದ ಸಾಂಸ್ಥಿಕ ಚುನಾವಣೆ ನಡೆಸುವ ಸಂಬಂಧ ಜೆಡಿಎಸ್ ಕೋರ್ ಕಮಿಟಿ ಸಭೆ ಮೇ 5ರಂದು ನಡೆಯಲಿದೆ. ಜೆಡಿಎಸ್‍ನ ಮೂರನೇ ಕೋರ್ ಕಮಿಟಿ ಸಭೆಯು ಪಕ್ಷದ ಕೇಂದ್ರ ಕಚೇರಿ ಜೆಪಿಭವನದಲ್ಲಿ ಗುರುವಾರ ನಡೆಯಲಿದೆ.

ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶಂಪುರ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ರಾಜ್ಯ ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಮೇ 13ರಂದು ನೆಲಮಂಗಲದ ಬಳಿ ಜನತಾ ಜಲಧಾರೆಯ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಜನತಾ ಜಲಧಾರೆ ಕಾರ್ಯಕ್ರಮ 15 ಸ್ಥಳಗಳಿಂದ ಏಕಕಾಲಕ್ಕೆ ಪ್ರಾರಂಭವಾಗಿ ಕಾವೇರಿ ಕೃಷ್ಣ ಸೇರಿದಂತೆ ಪವಿತ್ರ ನದಿಗಳಿಂದ ಜಲ ಸಂಗ್ರಹಿಸಲಾಗಿದೆ.

ರಾಜ್ಯದ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಭರವಸೆ ನೀಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಸ್ವಂತ ಬಲದ ಮೇಲೆ ಅಕಾರ ನೀಡಬೇಕೆಂಬ ಕೋರಿಕೆಯನ್ನು ಜನತೆ ಮುಂದಿಟ್ಟು, ನೀರಾವರಿ ಯೋಜನೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದೆ.