ಜೆಡಿಎಸ್‍ಗೆ ಮರಳಲು ಎಚ್.ಸಿ.ಬಾಲಕೃಷ್ಣಗೆ ಆಹ್ವಾನ

ಬೆಂಗಳೂರು, ಮೇ 17- ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಕ್ಷ ತೊರೆದು ಹೋಗಿದ್ದ ನಾಯಕರು, ಮುಖಂಡರನ್ನು ಮರಳಿ ಕರೆತರುವ ಪ್ರಯತ್ನಕ್ಕೆ ಮುಂದಾಗಿದೆ.

ನಾನಾ ಕಾರಣಗಳಿಂದಾಗಿ ಪಕ್ಷ ತೊರೆದು ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆಯಾಗಿದ್ದ ಕೆಲವು ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಮರಳಿ ಜೆಡಿಎಸ್‍ಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗೆ ಪಕ್ಷದ ವರಿಷ್ಠರು ಬಾಲಕೃಷ್ಣ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ.

ಜತೆಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬಾಲಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಬಾಲಕೃಷ್ಣ ಅವರು ಜೆಡಿಎಸ್‍ಗೆ ಮರಳಿ ಸೇರ್ಪಡೆಯಾಗುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮಾತುಕತೆಯ ಹಂತದಲ್ಲೇ ಇದೆ ಎಂದು ತಿಳಿದುಬಂದಿದೆ.

ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ವ್ಹಿಪ್ ಉಲ್ಲಂಘನೆ ಮಾಡಿ ಮತ ಚಲಾಯಿಸಿ ಆನಂತರ ಬಾಲಕೃಷ್ಣ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ರ್ಪಧಿಸಿ ಪರಾಜಿತರಾಗಿದ್ದರು.

ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಈ ನಡುವೆ ಈ ಬೆಳವಣಿಗೆ ನಡೆದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ರಾಜ್ಯದಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಜೆಡಿಎಸ್ ನಡೆಸಿದ ಬೆನ್ನಲ್ಲೇ ಕೆಲವು ನಾಯಕರು, ಮುಖಂಡರು ಜೆಡಿಎಸ್ ಬಗ್ಗೆ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗಿದೆ. ಇದೇ ರೀತಿ ಬೇರೆ ಬೇರೆ ಪಕ್ಷಗಳಲ್ಲಿ ಆಶ್ರಯ ಪಡೆದಿರುವ ಕೆಲವು ನಾಯಕರು ವಿಧಾನಸಭೆ ಚುನಾವಣೆ ವೇಳೆಗೆ ಮರಳಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಮೇ 25ರ ನಂತರ ಪಕ್ಷಕ್ಕೆ ಮುಖಂಡರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಹಲವು ಮುಖಂಡರು ಪಕ್ಷದ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಜೆಡಿಎಸ್‍ನ ಕೆಲವು ಶಾಸಕರು ಪಕ್ಷ ತೊರೆದು ರಾಷ್ಟ್ರೀಯ ಪಕ್ಷಗಳ ಸೇರ್ಪಡೆಗೆ ಮುಂದಾಗಿರುವ ಬೆನ್ನಲ್ಲೇ ಮತ್ತೆ ಕೆಲವರು ಪಕ್ಷಕ್ಕೆ ಮರಳಿ ಬರುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂಬ ವ್ಯಾಖ್ಯಾನ ಮಾಡಲಾಗುತ್ತಿದೆ.