ನಾಳೆ ಜನತಾ ಜಲಧಾರೆ ಸಮಾರೋಪ ಸಮಾವೇಶ

Spread the love

ಬೆಂಗಳೂರು, ಮೇ 12- ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ನಡೆದಿದ್ದು, ನಾಳೆ ನೆಲಮಂಗಲ ಸಮೀಪ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾವೇಶ ನಡೆಯಲಿದೆ.

ಈ ಸಮಾವೇಶದಲ್ಲಿ 4 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ರಾಜ್ಯದ ನೀರಾವರಿ ಯೋಜನೆಗಳನ್ನೂ ಜಾರಿ ಮಾಡುವ ನಿಟ್ಟಿನಲ್ಲಿ ಗಂಗಾ ಮಾತೆಯ ಸಾಕ್ಷಿಯಾಗಿ ಸಂಕಲ್ಪ ಮಾಡಲಾಗುವುದು. ಪಕ್ಷಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು-ಹಾಸನ ಹೆದ್ದಾರಿಯ ಪಕ್ಕದ ಬೃಹತ್ ಮೈದಾನದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್, ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮುಖಂಡರು, ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಭಾಗಿಯಾಗಲಿದ್ದಾರೆ.ಸಮಾವೇಶದಲ್ಲಿ ಭಾಗವಹಿಸುವ ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್, ಊಟ ಇತ್ಯಾದಿಗಳ ವ್ಯವಸ್ಥೆ ಒದಗಿಸಲಾಗಿದೆ.

ಗಂಗಾ ಆರತಿ: ಜನತಾ ಜಲಧಾರೆ ಸಮಾವೇಶದಲ್ಲಿ ಗಂಗಾ ಪೂಜೆ ಮತ್ತು ಗಂಗಾ ಆರತಿ ಕಾರ್ಯಕ್ರಮ ವಿಶೇಷವಾಗಿದೆ. ನಮ್ಮ ನೆಲದ ಪರಂಪರೆಗೆ ಧಕ್ಕೆಯಾಗದಂತೆ ಸಮಾವೇಶವನ್ನು ಆಯೋಜಿಸಲಾಗಿದೆ. ಜಲಧಾರೆ ಕಾರ್ಯಕ್ರಮದಲ್ಲಿ ಸಂಜೆ 6.30ಕ್ಕೆ ಗಂಗಾ ಆರತಿ ಕಾರ್ಯಕ್ರಮ ನಡೆಯಲಿದೆ.

ಇದಕ್ಕಾಗಿ 20 ಪಂಡಿತರ ವಿಶೇಷ ತಂಡ ವಾರಣಾಸಿಯಿಂದ ಬರುತ್ತಿದ್ದಾರೆ. ಈಗಾಗಲೇ 180 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಗಿದ್ದು, 15 ಗಂಗಾರಥಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಳಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

# ಜಲಧಾರೆಯ ಉದ್ದೇಶ:

ನಮ್ಮ ರಾಜ್ಯದಲ್ಲಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಗಂಗಾ ತಾಯಿ ಆಶೀರ್ವಾದ ಪಡೆಯಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಸಮಾವೇಶದಲ್ಲಿ ರಾಜ್ಯದ ಜನತೆ ಐದು ವರ್ಷಗಳ ಸ್ವತಂತ್ರ ಸರ್ಕಾರ ನೀಡಿದರೆ ನಮ್ಮ ಪಕ್ಷದಿಂದ ಕೈಗೊಳ್ಳಲಾಗುವ ನೀರಾವರಿ ಯೋಜನೆಗಳ ಬಗ್ಗೆ ಸಂಕಲ್ಪ ಮಾಡಲಾಗುವುದು ಎಂದು ಹೇಳಿದರು.

ನೀರಿನ ಸಮಸ್ಯೆಯನ್ನು ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗೇ ಮುಂದುವರೆದರೆ ನಗರದ ಜನರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಅರ್ಕಾವತಿ ನದಿ ಪುನಶ್ಚೇತನ ಅಂದರು.

ಅದು ನಿಂತು ಹೋಯಿತು. ಬೆಂಗಳೂರು ಹಲವು ಕೆರೆಗಳನ್ನು, ರಾಜ ಕಾಲುವೆಗಳನ್ನು ನುಂಗಿ ಹಾಕಿದ್ದಾರೆ. ಅದನ್ನು ಸರಿಪಡಿಸಬೇಕು. ಕಳೆದ ಎರಡು ಮೂರು ವರ್ಷಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಲಘುವಾಗಿ ಚರ್ಚೆ ಮಾಡಿದ್ದಾರೆ. ಅವರಿಗೆ ಉತ್ತರ ಕೊಡುವ ಕಾರ್ಯಕ್ರಮ ಇದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

Facebook Comments