ಜೆಡಿಎಸ್ ಜನತಾ ಪರ್ವ ಕಾರ್ಯಾಗಾರಕ್ಕೆ ವಿದ್ಯುಕ್ತ ಚಾಲನೆ

ಬೆಂಗಳೂರು,ಸೆ.27- ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ತಾಲೀಮು ಆರಂಭಿಸಿರುವ ಜೆಡಿಎಸ್ ಜನತಾ ಪರ್ವ 1.0 ಕಾರ್ಯಾಗಾರಕ್ಕೆ ಇಂದು ವಿದ್ಯುಕ್ತ ಚಾಲನೆ ನೀಡಲಾಯಿತು. ಇಂದಿನಿಂದ ನಾಲ್ಕು ದಿನಗಳ ಕಾಲ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಸರಣಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಾಗಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸಲಿರುವ ಸಂಭವನೀಯ ಅಭ್ಯರ್ಥಿಗಳಿಗೆ ತಜ್ಞರಿಂದ ಚುನಾವಣಾ ಸಿದ್ದತೆ ಬಗ್ಗೆ ತರಬೇತಿ ನೀಡಲಾಯಿತು.

ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಪಕ್ಷದ ವರಿಷ್ಠರು ಚುನಾವಣೆ ತಂತ್ರಗಾರಿಕೆ ಬಗ್ಗೆ ಮಾರ್ಗದರ್ಶನ ಮಾಡಿದರು. ಪಕ್ಷ ಸಂಘಟನೆ ಮತ್ತು ಪರಂಪರೆ, ಪ್ರಸ್ತುತ ರಾಜಕೀಯ ಸನ್ನಿವೇಶ, ಜೆಡಿಎಸ್‍ಗೆ ಇರುವ ರಾಜಕೀಯದ ಮುಕ್ತ ಅವಕಾಶಗಳ ಬಗ್ಗೆ ವಿಷಯ ಮಂಡನೆಯೂ ಮಾಡಲಾಯಿತು.

ಕ್ಷೇತ್ರವಾರು ಯಾವ ರೀತಿ ಪಕ್ಷ ಸಂಘಟನೆ ಮಾಡಬೇಕು, ಚುನಾವಣೆಗೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು. ಪ್ರಚಾರಕ್ಕೆ ಸೋಷಿಯಲ್ ಮೀಡಿಯಾ ಬಳಕೆ ಬಗ್ಗೆ ವರಿಷ್ಠರು ಮಾರ್ಗದರ್ಶನ ಮಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ನಾಳೆ 2023ಕ್ಕೆ ಸ್ವಂತ ಬಲದ ಸ್ವತಂತ್ರ ಸರ್ಕಾರದ ಸಂಕಲ್ಪ ಕುರಿತು ಕುಮಾರಸ್ವಾಮಿ ಮಾತನಾಡಲಿದ್ದಾರೆ. ಅಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಘೋಷಿಸಲಿರುವ ಪಂಚತಂತ್ರ ಕಾರ್ಯಕ್ರಮಗಳ ಬಗ್ಗೆಯೂ ಸಂಭವನೀಯ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಸೆ.29ರಂದು ಮಹಿಳಾ ಮುಖಂಡರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪಕ್ಷದ ಪರಂಪರೆ ಕುರಿತು ಮಾತನಾಡಲಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಗಳ ಸಿದ್ದತೆ ಬಗ್ಗೆಯೂ ಮಾರ್ಗದರ್ಶನ ಮಾಡಲಿದ್ದಾರೆ. ಸೆ.30ರಂದು ಯುವ ಕಾರ್ಯಾಗಾರ ನಡೆಯಲಿದ್ದು, ಅದರಲ್ಲಿ ವಿದ್ಯಾರ್ಥಿ ಜನತಾದಳ ಸೇರಿದಂತೆ ಜೆಡಿಎಸ್ ಮುಖಂಡರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ.