ಜೆಡಿಎಸ್ ಪುನರ್ ಸಂಘಟನೆಗೆ ಆದ್ಯತೆ

Social Share

ಬೆಂಗಳೂರು, ಜ.19- ಪಕ್ಷ ಪುನರ್ ಸಂಘಟನೆಗೆ ಒತ್ತು ನೀಡಿರುವ ಜೆಡಿಎಸ್ ನಾಯಕರು ವಿಸಿಟಿಂಗ್ ಕಾರ್ಡ್ ಶೂರರಿಗೆ ಗೇಟ್‍ಪಾಸ್ ನೀಡಲು ಉದ್ದೇಶಿಸಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಸಮಗ್ರವಾಗಿ ಬಲಗೊಳಿಸಲು ಕಾರ್ಯಪ್ರವೃತ್ತರಾಗಿದ್ದು, ಆ ನಿಟ್ಟಿನಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಮುಂದಾಗಿದ್ದಾರೆ.
ಸ್ವಂತ ಶಕ್ತಿ ಮೇಲೆ ಪಕ್ಷವನ್ನು ಅಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ನಾಯಕರು ಆಂತರಿಕವಾಗಿ ಪಕ್ಷದಲ್ಲಿ ಮಹತ್ತರ ಬದಲಾವಣೆ ತರಲು ಚಾಲನೆ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಪಕ್ಷದಲ್ಲಿನ ವಿವಿಧ ಹುದ್ದೆ, ಸ್ಥಾನಮಾನ ಹೊಂದಿ ಕೇವಲ ವಿಜಿಟಿಂಗ್ ಕಾರ್ಡ್ ಇಟ್ಟುಕೊಂಡು ಓಡಾಡುವಂತಹವರಿಗೆ ಗೇಟ್‍ಪಾಸ್ ಕೊಡಲು ತೀರ್ಮಾನಿಸಿದ್ದಾರೆ.
ಪಕ್ಷದ ಸಂಘಟನೆ, ಬೆಳವಣಿಗೆಗೆ ಶ್ರಮಿಸದೆ ನಿಷ್ಕ್ರಿಯರಾಗಿರುವವರನ್ನು ಮುಂದುವರೆಸದಿರಲು ತೀರ್ಮಾನಿಸಲಾಗಿದೆ. ಇಂತಹವರಿಂದ ಪಕ್ಷದ ಬೆಳವಣಿಗೆಯಾಗುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಇಂತಹವರನ್ನು ಪಕ್ಷದಿಂದ ಹೊರಹಾಕುವುದೇ ಸೂಕ್ತ ಎಂಬ ತೀರ್ಮಾನಕ್ಕೆ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂಥಹವರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಸದಸ್ಯತ್ವ ನೋಂದಣಿಯನ್ನು ಚುರುಕುಗೊಳಿಸಬೇಕು. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಬೇಕು. ಪಕ್ಷ ಸಂಘಟನೆಗೆ ಆದ್ಯತೆ ನೀಡುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಪಕ್ಷದಲ್ಲಿ ಸ್ಥಾನಮಾನ ನೀಡಿ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈಗಾಗಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪಕ್ಷದ ಆಂತರಿಕ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಎಲ್ಲ ಹಂತದಲ್ಲೂ ಪಕ್ಷವನ್ನು ಪುನರ್ ಸಂಘಟಿಸಿ ಸದೃಢಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ಒಂದೆಡೆ ಪಕ್ಷದ ಮುಖಂಡರು ಪಕ್ಷ ತೊರೆದು ಬೇರೊಂದು ಪಕ್ಷಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ, ಮೇಲ್ಮನೆ ಚುನಾವಣೆಗಳಲ್ಲಿ ಪಕ್ಷಕ್ಕೆ ನಿರೀಕ್ಷಿತ ಜಯ ದೊರೆತಿಲ್ಲ. ಪಕ್ಷಕ್ಕಾಗಿರುವ ಹಿನ್ನಡೆಯಿಂದ ಕಾರ್ಯಕರ್ತರು ವಿಚಲಿತರಾಗಬಾರದು ಎಂಬ ಉದ್ದೇಶದಿಂದ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸದ್ಯ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ಪುನರ್ ಸಂಘಟನೆ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಬಹುದು ಅಷ್ಟೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪಕ್ಷವನ್ನು ಸದೃಢ ಗೊಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.

Articles You Might Like

Share This Article