ವಿಧಾನ ಪರಿಷತ್ ಸಭಾಪತಿ ಆಯ್ಕೆ ಕುರಿತು ಜೆಡಿಎಸ್ ಮಹತ್ವದ ಸಭೆ

ಬೆಂಗಳೂರು, ಜ.27- ವಿಧಾನ ಪರಿಷತ್ ಉಪಸಭಾಪತಿ ಹಾಗೂ ಸಭಾಪತಿ ಆಯ್ಕೆ ಸಂಬಂಧ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಇಂದು ರಾತ್ರಿ ಜೆಡಿಎಸ್ ಮಹತ್ವದ ಸಭೆ ನಡೆಯಲಿದೆ.  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಈಗಾಗಲೇ ಬಿಜೆಪಿ ಮುಂದೆ ಬೇಡಿಕೆ ಇಟ್ಟಿದೆ.

ವಿಧಾನ ಪರಿಷತ್‍ನ ಉಪಸಭಾಪತಿ ಸ್ಥಾನದ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದ್ದು, ಸ್ಪರ್ಧೆ ಮಾಡದಿರಲು ಜೆಡಿಎಸ್ ತೀರ್ಮಾನಿಸಿದೆ. ಬಿಜೆಪಿಗೆ ಉಪಸಭಾಪತಿ ಸ್ಥಾನವನ್ನು ಬಿಟ್ಟುಕೊಟ್ಟು ಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವ ಉದ್ದೇಶ ಜೆಡಿಎಸ್‍ಗಿದೆ. ಸಭಾಪತಿ ಕೆ.ಪ್ರತಾಪ್‍ಚಂದ್ರಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿವೆ. ಅವರ ರಾಜೀನಾಮೆಯಿಂದ ತೆರವಾಗುವ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಜೆಡಿಎಸ್ ಕೋರಲಿದೆ.

ನಿನ್ನೆ ಸಂಜೆ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಡೆದ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ತೀರ್ಮಾನಿಸಲಾಗಿದೆ. ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರೊಂದಿಗೆ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಸಂಬಂಧ ಮಾತುಕತೆ ನಡೆಸಲು ಕೂಡ ನಿರ್ಣಯಿಸಲಾಗಿದೆ. ಉಪಸಭಾಪತಿ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟು ಸಭಾಪತಿ ಸ್ಥಾನವನ್ನು ಪಡೆಯುವ ಬಗ್ಗೆ ಜೆಡಿಎಸ್ ಮಾತುಕತೆಗೆ ಮುಂದಾಗಿದೆ.

ಇಂದು ಬೆಳಗ್ಗೆ ಬಸವರಾಜ ಹೊರಟ್ಟಿ ನೇತೃತ್ವದ ಜೆಡಿಎಸ್ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಕ್ಷದ ನಿಲುವನ್ನು ತಿಳಿಸಿದೆ.  ಮುಖ್ಯಮಂತ್ರಿಗಳ ಸಂದೇಶಕ್ಕಾಗಿ ಕಾಯುತ್ತಿರುವ ಜೆಡಿಎಸ್ ಇಂದು ರಾತ್ರಿ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.