ಮುಂದಿನ ನಡೆಯ ಬಗ್ಗೆ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು, ಸೆ.13- ಕಲ್ಬುರ್ಗಿ ಮಹಾನಗರ ಪಾಲಿಕೆ ಮೈತ್ರಿ , ಪಕ್ಷ ಸಂಘಟನೆ, ಮುಂಬರುವ ಬಿಬಿಎಂಪಿ , ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ , ಪ್ರಸಕ್ತ ಅಧಿವೇಶನದಲ್ಲಿ ನಡೆಸಬೇಕಿರುವ ಹೋರಾಟ ಮೊದಲಾದ ವಿಚಾರಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಇಂದು ಸಂಜೆ ನಡೆಯುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆಗಳಿವೆ.

ಇಂದುಸಂಜೆ ಖಾಸಗಿ ಹೊಟೇಲ್‍ನಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಿದ್ದು , ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು , ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಯಾವ ಪಕ್ಷಕ್ಕೆ ಜೆಡಿಎಸ್ ಬೆಂಬಲಿಸಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಾನ ಅಂತರ ಕಾಯ್ದುಕೊಳ್ಳುವ ಉದ್ದೇಶ ಹೊಂದಿರುವ ಜೆಡಿಎಸ್ ಕಲ್ಬುರ್ಗಿ ಪಾಲಿಕೆ ಅಧಿಕಾರದ ವಿಚಾರದಲ್ಲಿ ಯಾವ ನಿಲುವು ತಾಳಲಿದೆ ಎಂಬ ಕುತೂಹಲ ಮೂಡಿಸಿದೆ. ಈಗಾಗಲೇ ಬಿಜೆಪಿಯ ನಾಯಕರು , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಬೆಂಬಲವನ್ನು ಯಾಚಿಸಿದ್ದಾರೆ.
ಅದೇ ರೀತಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ದೇವೇಗೌಡರನ್ನು ಸಂಪರ್ಕಿಸಿ ಕಾಂಗ್ರೆಸ್‍ಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಯಾರೂ ಕೂಡ ತಮ್ಮನ್ನು ಸಂಪರ್ಕಿಸಿಲ್ಲ ಎಂಬ ಅಸಮಾಧಾನವನ್ನು ಕುಮಾರಸ್ವಾಮಿ ಈಗಾಗಲೇ ಹೊರ ಹಾಕಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಲ್ಬುರ್ಗಿ ಮಹಾನಗರ ಪಾಲಿಕೆ ಮೈತ್ರಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಈಗಾಗಲೇ ಕುಮಾರಸ್ವಾಮಿ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಗೌಡರು ನೀಡುವ ಸೂಚನೆಯ ಮೇಲೆ ಯಾವ ಪಕ್ಷದೊಂದಿಗೆ ಮೈತ್ರಿ ಎಂಬುದು ನಿರ್ಧಾರವಾಗಲಿದೆ.

ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯವನ್ನು ತೀವ್ರವಾಗಿ ಕಾಡಿದ ಕೋವಿಡ್ ಸಂಕಷ್ಟ , ಅದನ್ನು ನಿರ್ವಹಿಸಿದ ಸರ್ಕಾರದ ಕಾರ್ಯ ವೈಖರಿ , ಅತಿವೃಷ್ಟಿ , ಬೆಲೆ ಏರಿಕೆ , ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು , ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಜೆಡಿಎಸ್ ನಿರ್ಧರಿಸಿದೆ.

ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಿ ಯಾವ ವಿಚಾರವನ್ನು ಆದ್ಯತೆಯ ಮೇಲೆ ಪ್ರಸ್ತಾಪಿಸಬೇಕು. ಸರ್ಕಾರದ ವೈಫಲ್ಯದ ವಿರುದ್ಧ ಒಳ, ಹೊರಗೆ ಹೋರಾಟ ಮಾಡುವುದು. ಪಕ್ಷದ ಸದಸ್ಯತ್ವ ಅಭಿಯಾನ ಚುರುಕುಗೊಳಿಸುವುದು. ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವುದು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಬಗ್ಗೆ ವರಿಷ್ಠರು ಮಾರ್ಗದರ್ಶನ ಮಾಡಲಿದ್ದಾರೆ.