ಸಂಕ್ರಾಂತಿ ಬಳಿಕ ಜೆಡಿಎಸ್‌ಗೆ ಚೈತನ್ಯ ತುಂಬುವ ಕಾರ್ಯಕ್ರಮ

Social Share

ಬೆಂಗಳೂರು, ಜ.1- ಸಂಕ್ರಾಂತಿ ಬಳಿಕ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಜೆಡಿಎಸ್ ನಾಯಕರು ಹೆಚ್ಚು ಒತ್ತು ನೀಡಲಿದ್ದು, ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಈಗಾಗಲೇ ಬಿಡದಿ ಹಾಗೂ ಬೆಂಗಳೂರಿನಲ್ಲಿ ಎರಡೂ ಹಂತದ ಕಾರ್ಯಾಗಾರ ಗಳನ್ನು ನಡೆಸಿದ್ದು, ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಪೂರಕ ಕಾರ್ಯಕ್ರಮ ರೂಪಿಸಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದ ವಿಚಲಿತರಾಗದಂತೆ ಪಕ್ಷ ಸಂಘಟನೆಗೆ ಮುಂದಾಗುವಂತೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಹುರಿದುಂಬಿ ಸುವ ಪ್ರಯತ್ನವನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ.
ರಾಜಕೀಯ ಪಕ್ಷದಲ್ಲಿ ಸೋಲು-ಗೆಲುವು ಸಹಜ. ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕಾಗಿರುವ ಹಿನ್ನಡೆ ಹಾಗೂ ಪಕ್ಷ ತೊರೆಯುತ್ತಿರುವ ಮುಖಂಡರಿಂದ ಧೃತಿಗೆಡುವ ಅಗತ್ಯವಿಲ್ಲ. ಪಕ್ಷವನ್ನು ಪುನರ್ ಸಂಘಟನೆ ಮಾಡಿ ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖರಾಗೋಣ ಎಂಬ ಧೈರ್ಯವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ನಾಯಕರು ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಮುಂದಿನ ವಾರ ಪಕ್ಷ ಸಂಘಟನೆಯ ರೂಪುರೇಷೆಗಳನ್ನು ಕುಮಾರಸ್ವಾಮಿ ಪ್ರಕಟಿಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಬಲಗೊಳಿಸಲು ಹಾಗೂ ಪಕ್ಷ ತೊರೆದವರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಹುಟ್ಟುಹಾಕುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಜತೆಗೆ ಪಕ್ಷಕ್ಕೆ ಶಕ್ತಿ ತುಂಬಲು ಜನಪರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ಘೋಷಣೆ ಮಾಡಿರುವಂತೆ ಸಂಕ್ರಾಂತಿ ನಂತರ ಮೊದಲ ಹಂತದ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.
ಒಟ್ಟಾರೆ ಪಕ್ಷಕ್ಕೆ ಹೊಸ ಚೈತನ್ಯ ನೀಡಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪುನರ್ ಸಂಘಟನೆ ಮಾಡಲು ಜೆಡಿಎಸ್ ನಾಯಕರು ಉದ್ದೇಶಿಸಿದ್ದಾರೆ.

Articles You Might Like

Share This Article