ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತಿಗೆ ಜೆಡಿಎಸ್‌ ಶಾಸಕ ಶರಣಗೌಡ ಮನವಿ

0
744

ಬೆಂಗಳೂರು,ಏ.29- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಆರೋಪ ಕೇಳಿಬಂದಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಗುರುಮಿಟ್ಕಲ್‌ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್‌ ಅವರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ದೇವೇಗೌಡರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಕೋರ್‌ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಂತರಿಕ ಸಮಿತಿ ರಚನೆ ಮಾಡಬೇಕು. ಆ ಸಮಿತಿಯು ಪೆನ್‌ಡ್ರೈವ್‌ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ತಿಳಿಸುವಂತಾಗಲಿ, ಅಲ್ಲಿಯವರೆಗೆ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆ ವೇಳೆ ವ್ಯತಿರಿಕ್ತ ಪ್ರಭಾವ ಬೀರದಿರಲು ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಕೋರಿದ್ದಾರೆ.

ಕೆಲ ದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ವಿಡಿಯೋ ತುಣುಕುಗಳಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ಪಕ್ಷದ ನಾಯಕರಾದ ನೀವು ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುತ್ತಿದ್ದೀರಿ ಎಂಬುದರಲ್ಲಿ ಎರಡು ಮಾತಿಲ್ಲ. 6 ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ, ರಾಷ್ಟ್ರಕ್ಕೆ ಮಾದರಿಯಾದ ತತ್ವ ಸಿದ್ಧಾಂತಗಳ ಬುನಾದಿ ಮೇಲೆ ಜೆಡಿಎಸ್‌ ಅನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ್ದೀರಿ, ರಾಷ್ಟ್ರದ ಮೊದಲ ಕನ್ನಡಿಗ ಪ್ರಧಾನಿ ಎಂಬ ಹೆಗ್ಗಳಿಕೆಯೂ ನಿಮ್ಮದಾಗಿದೆ.

ಹೆಣ್ಣು ಸಾಕ್ಷಾತ್‌ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನು ಗೌರವಾದರಗಳಿಂದ ನೋಡಿಕೊಂಡು ಬಂದಿದ್ದೀರಿ. ನಮ್ಮ ಪಕ್ಷದ ಚಿಹ್ನೆಯೂ ಕೂಡ ಭತ್ತದ ತೆನೆ ಹೊತ್ತ ಮಹಿಳೆಯಾಗಿದ್ದು, ಮಹಿಳೆಯರ ಬಗ್ಗೆ ಇರುವ ಗೌರವವನ್ನು ಪ್ರತಿನಿಧಿಸುತ್ತದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ ಮಾಡಿ, ವಿದ್ಯಾರ್ಥಿನಿಯರಿಗೆ ಸೈಕಲ್‌ ಭಾಗ್ಯವನ್ನು ನೀಡುವ ಮೂಲಕ ಹೆಣ್ಣು ಮಕ್ಕಳ ಕಷ್ಟಕ್ಕೆ ಸ್ಪಂದಿಸಿದ್ದರು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.