ಪಕ್ಷದ ಸೂಚನೆ ಧಿಕ್ಕರಿಸಿ ಕಾಂಗ್ರೆಸ್‍ಗೆ ಮತ ಚಲಾಯಿಸಿದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ

Spread the love

ಬೆಂಗಳೂರು,ಜೂ.10-ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್‍ಗೆ ಮತ ಚಲಾಯಿಸಿದ್ದಾರೆ.  ಈ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಅಡ್ಡ ಮತದಾನ ನಡೆಯಬಹುದೆಂಬ ಅನುಮಾನಕ್ಕೆ ಶ್ರೀನಿವಾಸ್ ಗೌಡ ಅವರೇ ಮುನ್ನುಡಿ ಬರೆದಿದ್ದಾರೆ.

ಇಂದು ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಹಕ್ಕು ಚಲಾಯಿಸಿರುವುದನ್ನು ಶ್ರೀನಿವಾಸ್ ಗೌಡ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು. ಈ ದಿಢೀರ್ ಬೆಳವಣಿಗೆಯಿಂದಾಗಿ ಜೆಡಿಎಸ್‍ನ ಒಟ್ಟು 32 ಮತಗಳ ಪೈಕಿ 1 ಮತ ಕೈ ಕೊಟ್ಟಿರುವುದು ಸಾಬೀತಾಗಿದೆ. ಕೆಲ ತಿಂಗಳಿಂದ ಶ್ರೀನಿವಾಸ್ ಗೌಡ ಅವರು ಜೆಡಿಎಸ್ ಜೊತೆ ಸಂಬಂಧ ಅಷ್ಟಕಷ್ಟೇ ಎಂಬಂತಿತ್ತು.

ಪಕ್ಷದ ಹಿರಿಯರಾದ ನನ್ನನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ ನಾನು ಜೆಡಿಎಸ್‍ಗೆ ಗುಡ್ ಬೈ ಹೇಳುತ್ತೇನೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಶಾಸಕ ರಮೇಶ್‍ಕುಮಾರ್ ಅವರು ಶ್ರೀನಿವಾಸ್ ಗೌಡ ಅವರನ್ನು ಭೇಟಿಯಾಗಿ ಗೌಪ್ಯವಾಗಿ ಮಾತುಕತೆ ನಡೆಸಿದರು. ಇದು ಫಲಪ್ರದವಾಗಿದ್ದರಿಂದಲೇ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರಿಗೆ ವಿಪ್ ಜಾರಿ ಮಾಡಿದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಶಾಸನಸಭೆಯಲ್ಲಿ ನಡೆಯುವ ಮತದಾನದ ವೇಳೆ ಮಾತ್ರ ಇದು ಅನ್ವಯವಾಗುತ್ತದೆ. ಶಾಸನಸಭೆಯಿಂದ ಆಚೆ ನಡೆಯುವ ಯಾವುದೇ ಚುನಾವಣೆಗೂ ಕಾಯ್ದೆಯನ್ನು ಶಾಸಕರ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಹೆಚ್ಚೆಂದರೆ ಅಡ್ಡಮತದಾನ ಮಾಡಿದ ಶಾಸಕರ ಮೇಲೆ ಆಯಾ ಪಕ್ಷದವರು ಶಿಸ್ತು ಕ್ರಮ ಇಲ್ಲವೇ ಉಚ್ಛಾಟನೆ ಮಾಡುವಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಅವರ ಮೇಲೆ ಕ್ರಮ ಜರುಗಿಸುವಂತೆ ವಿಧಾನಸಭೆಯ ಸ್ಪೀಕರ್‍ಗೆ ಲಿಖಿತ ದೂರು ಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Facebook Comments