ಕಾಂಗ್ರೆಸ್ ಯಾತ್ರೆಯಲ್ಲಿ ಭಾಗವಹಿಸಲು ಜನರಿಗೆ ಆಹ್ವಾನ ನೀಡಿದ ಜೆಡಿಎಸ್ ಶಾಸಕ

Social Share

ಬೆಂಗಳೂರು, ಆ.12- ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ಜೆಡಿಎಸ್‍ನ ಶಾಸಕರೊಬ್ಬರು ಆಹ್ವಾನ ನೀಡಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್‍ನಲ್ಲಿ ಹಂಚಿಕೊಳ್ಳಲಾಗಿದೆ.

ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ವಿಡಿಯೋ ಸಂದೇಶದಲ್ಲಿ ಮಾತನಾಡಿದ್ದು, ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದವರ ತ್ಯಾಗ-ಬಲಿದಾನವನ್ನು ಗೌರವಿಸಲು ಕಾಂಗ್ರೆಸ್ ಆಗಸ್ಟ್ 15ರಂದು ಸ್ವಾತಂತ್ರ್ಯ ನಡಿಗೆಯನ್ನು ಹಮ್ಮಿಕೊಂಡಿದೆ. ಅತಿದೊಡ್ಡ ಈ ಯಾತ್ರೆಯಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.

ಶ್ರೀನಿವಾಸಗೌಡರನ್ನು ಜೆಡಿಎಸ್ ಈಗಾಗಲೇ ಉಚ್ಚಾಟಿಸಿದೆ. ಈ ಮೊದಲು ವಿಧಾನಸಭೆಯಿಂದ ವಿಧಾನಪರಿಷತ್ ಮತ್ತು ರಾಜ್ಯಸಭೆಗೆ ಚುನಾವಣೆ ನಡೆದಾಗ ಶ್ರೀನಿವಾಸಗೌಡ ಅವರು ಜೆಡಿಎಸ್ ವಿರುದ್ಧ ಮತ ಚಲಾಯಿಸಿದ್ದರು. ಅಧಿಕೃತವಾಗಿ ಕಾಂಗ್ರೆಸ್ ಸೇರದೆ ಇದ್ದರೂ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಮೊದಲು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗುವ ವೇಳೆ ನಡೆದ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ್ದ ಶ್ರೀನಿವಾಸಗೌಡ, ಆಪರೇಷನ್ ಕಮಲದ ಭಾಗವಾಗಿ ಬಿಜೆಪಿಯ ಕೆಲ ಶಾಸಕರು ಮತ್ತು ನಾಯಕರು ನಮ್ಮ ಮನೆಗೆ ಬಂದು ಐದು ಕೋಟಿ ರೂಪಾಯಿಗಳನ್ನು ಇಟ್ಟು ಹೋಗಿದ್ದರು. ನಾನು ಅದನ್ನು ವಾಪಾಸ್ ಕೊಟ್ಟು ಆಮಿಷಕ್ಕೆ ಬಲಿಯಾಗದೆ ಪ್ರಾಮಾಣಿಕನಾಗಿ ಉಳಿದೆ ಎಂದು ಹೇಳುವ ಮೂಲಕ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದರು.

ಕಾಂಗ್ರೆಸ್‍ನ ಸ್ವಾತಂತ್ರ್ಯ ನಡಿಗೆಗೆ ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರು ಕರೆ ನೀಡಿದ್ದಾರೆ. ಆದರೆ ಶ್ರೀನಿವಾಸ ಗೌಡ ಅವರನ್ನು ಹೊರತು ಪಡಿಸಿ ಉಳಿದ ಬೇರೆ ಯಾವ ಪಕ್ಷದ ಶಾಸಕರು ಈವರೆಗೂ ಯಾತ್ರೆಗೆ ಬೆಂಬಲ ವ್ಯಕ್ತ ಪಡಿಸಿಲ್ಲ. ಕಾಂಗ್ರೆಸ್ ನಾಯಕರು, ಶಾಸಕರ ವಿಡಿಯೋ ಸಂದೇಶಗಳನ್ನು ಮಾತ್ರ ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಮಾಡಲಾಗುತ್ತಿದೆ. ಯಾತ್ರೆಗೆ ಭಾರೀ ಸಿದ್ಧತೆ ನಡೆಸಲಾಗುತ್ತಿದೆ.

Articles You Might Like

Share This Article