ಬೆಂಗಳೂರು,ಜ.17- ಜನತಾ ಜಲಧಾರೆ ಯೋಜನೆಯ ಸಿದ್ದತೆ, ಪಕ್ಷ ಸಂಘಟನೆ ಬಗ್ಗೆ ಜೆಡಿಎಸ್ ಮಹತ್ವದ ಸಭೆ ನಾಳೆ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಾಳೆ ಮಧ್ಯಾಹ್ನ ಜೆ.ಪಿ.ಭವನದಲ್ಲಿ ಸಭೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸೇರಿದಂತೆ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖ ಮುಖಂಡರನ್ನು ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.
ರಾಜ್ಯದ ಪ್ರಮುಖ ಜೀವನದಿಗಳಿಂದ ಜಲವನ್ನು ತಂದು ನಗರದಲ್ಲಿ ಪೂಜಿಸುವ ಉದ್ದೇಶ ಹೊಂದಿರುವ ಜನತಾ ಜಲಧಾರೆ ರೂಪುರೇಷೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಜ.26ರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಸೋಂಕು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಯಾವ ರೀತಿ ಜಲಧಾರೆ ಕಾರ್ಯಕ್ರಮವನ್ನು ಮಾಡಬೇಕು ಇಲ್ಲವೇ ಮುಂದೂಡಬೇಕೆ ಎಂಬುದರ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ.
ಬಿಬಿಎಂಪಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳ ಸಿದ್ದತೆ ಹಾಗೂ ತಳಮಟ್ಟದಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ 2023ರ ವಿಧಾನಸಭೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ನಾಳಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.
