ಮೋದಿ ನಾಮಬಲವಿಲ್ಲದೆ ಬಿಜೆಪಿಯವರ ಯೋಗ್ಯತೆಗೆ ಠೇವಣಿ ಕೂಡ ಸಿಗಲ್ಲ : ಜೆಡಿಎಸ್

Social Share

ಬೆಂಗಳೂರು,ನ.13-ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಆಹ್ವಾನಿಸದೆ ರಾಜ್ಯ ಸರ್ಕಾರ ಶಿಷ್ಟಾಚಾರದ ಲೋಪ ಎಸಗಿದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ ಎಂದು ಜೆಡಿಎಸ್ ಮತ್ತೆ ವಾಗ್ದಾಳಿ ಮಾಡಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಇಷ್ಟಕ್ಕೂ ಅದು ಕೇಶವಕೃಪದ ಕಾರ್ಯಕ್ರಮವಲ್ಲ. ಬೂಟಾಟಿಕೆ ದಾಸಯ್ಯನಿಗೆ ಮೈಯಲ್ಲಾ ಪಂಗನಾಮ ಎನ್ನುವಂತಿದೆ ಬಿಜೆಪಿ ಪರಿಸ್ಥಿತಿ. ಆಪರೇಷನ್ ಕಮಲವೇ ಅದರ ಶಿಷ್ಟಾಚಾರ, ಸುಳ್ಳಿನ ಪ್ರಚಾರವೇ ಅದರ ಸಂಸ್ಕಾರ ಎಂದು ಟೀಕಾಪ್ರಹಾರ ನಡೆಸಿದೆ.

ಹೆಚ್.ಡಿ.ದೇವೇಗೌಡರನ್ನು ಜೆಡಿಎಸ್ ಎಂದಿಗೂ ಜಾತಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಅರ್ಧದಿನದ ಕರ್ನಾಟಕದ ಭೇಟಿ ಏನನ್ನು ಗುರಿ ಮಾಡಿಕೊಂಡಿತ್ತು? ಎನ್ನುವುದನ್ನು ಮಾಧ್ಯಮಗಳೇ ನಿರಂತರವಾಗಿ ವರದಿ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ ಎಂದು ವಾಗ್ದಾಳಿ ಮಾಡಿದೆ.

ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ಮಾಜಿ ಪ್ರಧಾನಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಪ್ರಶ್ನೆ ಮಾಡಿದ್ದನ್ನೇ ಮಹಾ ಅಪರಾಧ ಎಂದು ಚಿತ್ರಿಸುತ್ತಿರುವ ಬಿಜೆಪಿಯ ವಿಕೃತಿ ಆದಿಯಿಂದಲೂ ಧರ್ಮ, ಜಾತಿ ಮತ್ತು ಸುಳ್ಳಿನ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಮಿಥ್ಯೆ ಎನ್ನಲಾದಿತೆ ಎಂದು ಪ್ರಶ್ನಿಸಿದೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಭಯ ಎನ್ನುವುದು ಹಾಗಿರಲಿ, ಪ್ರಧಾನಿಯ ನಾಮಬಲ ಒಂದಿಲ್ಲದಿದ್ದರೆ ನಿಮಗೆ ಠೇವಣಿಗೂ ಖಾತರಿ ಇಲ್ಲ. ಇನ್ನು 6 ತಿಂಗಳಲ್ಲಿ ಮೋದಿ ಅವರು ಎಷ್ಟು ಸಲ ಕರ್ನಾಟಕಕ್ಕೆ ಓಡೋಡಿ ಬರುತ್ತಾರೋ ನೋಡೋಣ. ಅಲ್ಲಿ ನಿಮ್ಮ ಯೋಗ್ಯತೆಯ ಅಳತೆ ಎಷ್ಟು? ಎಂಬುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದೆ.

ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುವುದನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎನ್ನುತ್ತಿದೆ ಬಿಜೆಪಿ. ಭೂತದ ಬಾಯಲ್ಲಿ ಭಗದ್ಗೀತೆ ಎಂದರೆ ಇದೇ. ಧರ್ಮ, ಜಾತಿ, ಆಚಾರ, ವಿಚಾರ, ಆಹಾರದ ವಿಷಯದಲ್ಲೇ ವಿಷ-ವಿಕೃತಿಗಳನ್ನು ಬಿತ್ತಿದ ಬಿಜೆಪಿ, ಈಗ ಸಹಿಷ್ಣುತೆಯ ಬಗ್ಗೆ ಪಾಠ ಬಿಗಿಯುತ್ತಿದೆ ಎಂದು ಆರೋಪಿಸಿದೆ.

20 ದಿನಗಳ ಹಿಂದೆ ಸಚಿವ ಅಶ್ವತ್ಥನಾರಾಯಣ ಅವರು ಮಾಜಿ ಪ್ರಧಾನಿಗಳ ನಿವಾಸಕ್ಕೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹದ ಬಗ್ಗೆ ತಿಳಿಸಿ ಆಹ್ವಾನಿಸಿದ್ದರಷ್ಟೇ. ಆದರೆ, ಮುಖ್ಯಮಂತ್ರಿಗಳು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸಿದ್ದರು ಮತ್ತೂ ಆಹ್ವಾನ ಪತ್ರಿಕೆಯಲ್ಲೂ ದೇವೇಗೌಡರ ಹೆಸರನ್ನು ನಮೂದಿಸಲಾಗಿತ್ತೆಂದು ಹಸಿಸುಳ್ಳನ್ನೇ ಬಿಜೆಪಿ ಟ್ವೀಟಿಸಿದೆ ಎಂದು ಟೀಕಿಸಿದೆ.

ಬಿಜೆಪಿ ಗೊಬೆಲ್ ಸಂತತಿಯ ಶಿಶು ಎನ್ನುವುದಕ್ಕೆ ಇದಕ್ಕಿಂತ ಸತ್ಯ ಸಾಕ್ಷ್ಯ ಬೇಕಾ? ಸುಳ್ ಬಿಜೆಪಿಗೆ ಸತ್ಯವೆಂದರೆ ಅಪಥ್ಯ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸುಳ್ ಸಿಎಂ ಎಂದೇ ಪ್ರಖ್ಯಾತಿ ಆಗುತ್ತಿದ್ದಾರೆ. ಇದಲ್ಲವೇ ವಿಪರ್ಯಾಸ ಎಂದಿದೆ.

ಟೈರ್ ಸ್ಪೋಟಗೊಂಡು ಸುಟ್ಟು ಕರಕಲಾದ ಖಾಸಗಿ ಬಸ್

ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಸ್ವತಃ ಫೋನ್ ಕರೆ ಮೂಲಕ ದೇವೇಗೌಡರನ್ನು ಆಹ್ವಾನಿಸಿದ್ದಾರೆ ಎಂದು ಗೊಬೆಲ್ ಬಿಜೆಪಿ ಟ್ವೀಟಿಸಿ ಸುಳ್ಳು ಹೇಳಿದೆ. ಸತ್ಯ ಏನೆಂಬುದನ್ನು ನಾವೂ ಟ್ವೀಟಿನಲ್ಲೇ ರಾಜ್ಯದ ಜನತೆಗೆ ನಿವೇದಿಸಿದ್ದೇವೆ. ಅದನ್ನು ಓದಲು ಗೊಬೆಲ್ ಬಿಜೆಪಿಗೆ ಗರ ಬಡಿದಿದೆಯಾ ಎಂದು ಜೆಡಿಎಸ್ ಪ್ರಶ್ನಿಸಿದೆ.

ನಾಡಪ್ರಭುಗಳ ವಿಚಾರದಲ್ಲೂ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಅರ್ಧದಿನದ ಭೇಟಿಯಲ್ಲಿ ಘನವೇತ್ತ ಪ್ರಧಾನಿಗಳು ಮಾಡಿದ್ದಾದರೂ ಏನು? ಒಂದೇ ಕಲ್ಲಿನಲ್ಲಿ ನಾಲ್ಕು ಜಾತಿಗಳ ಮತಬುಟ್ಟಿಗೆ ಕೈ ಹಾಕಿದ ಪ್ರಧಾನಿ, ಪ್ರತಿಮಾ ಪಥ, ಮೋದಿ ರಥ ಎನ್ನುವ ಸುದ್ದಿಗಳನ್ನು ರಾಜ್ಯ ಬಿಜೆಪಿ ನೋಡಲಿಲ್ಲವೆ?

ಕಮಲಕ್ಕೆ ಕಾಮಾಲೆ ಕಣ್ಣು ಎನ್ನುವುದು ನಾಟಕವೋ, ಬೂಟಕವೋ? ಜಾತಿವಾರು ಮತಗಳ ಧ್ರುವೀಕರಣಕ್ಕೆ ಹೊರಟವರು ಯಾರು? ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಪದವನ್ನು ಹೇಳುತ್ತಲೇ ಕುಲಕಿಚ್ಚಿನ ರಾಜಕೀಯ ಮಾಡಿದವರು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಯಾಕೆಂದು ಪ್ರಶ್ನೆಗಳ ಸುರಿಮಳೆಗೈದಿದೆ.

ಜೆಡಿಎಸ್ ಪಂಚರತ್ನ ರಥಯಾತ್ರೆ ಮತ್ತೆ ಮುಂದೂಡಿಕೆ

ಸಂಸ್ಕಾರವೇ ಗೊತ್ತಿಲ್ಲದ ಪಕ್ಷಕ್ಕೆ ಶಿಷ್ಟಾಚಾರ ಮಾತೇಕೆ? ಅದು ತನಗಿಲ್ಲ ಎಂದು ಬಿಜೆಪಿ ಸಾಬೀತುಪಡಿಸಿದೆ. ಕನ್ನಡದ ಆಚಾರ-ವಿಚಾರಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಆ ಪಕ್ಷ, ಕನ್ನಡನಾಡಿಗೆ ಬಹುದೊಡ್ಡ ಬೆದರಿಕೆ ಎಂದು ಆರೋಪಿಸಿದೆ.

Articles You Might Like

Share This Article